ಮೈಸೂರು : ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಜನರ ಆಶೀರ್ವಾದವೇ ಪ್ರಮುಖ ಕಾರಣವಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. ಅರಸುರವರು ಮೈಸೂರಿನವರೇ ಆಗಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ತಾಲ್ಲೂಕು ಬೋರ್ಡ್ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ ಸಂದರ್ಭದಲ್ಲಿ ಸಚಿವನಾಗುವ ಅಥವಾ ಮುಖ್ಯಮಂತ್ರಿಯಾಗುವ ನಿರೀಕ್ಷೆಯೇ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದುವರೆಗೆ 13 ಚುನಾವಣೆಗಳನ್ನು ಎದುರಿಸಿ 9 ಬಾರಿ ಗೆಲುವು ಸಾಧಿಸಿರುವುದಾಗಿ ತಿಳಿಸಿದರು.

ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದರೂ ದೇವರಾಜ ಅರಸು ಅವರು ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.


ಅರಸು ಅವರ ಆಡಳಿತಾವಧಿಯಲ್ಲಿದ್ದ ರಾಜ್ಯದ ಪರಿಸ್ಥಿತಿ ಇಂದಿನ ಪರಿಸ್ಥಿತಿಗಿಂತ ಭಿನ್ನವಾಗಿತ್ತು. ಅವರು ಒಂದು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದುದನ್ನು ಸ್ಮರಿಸಿದರು.

ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಮುಂದಿನ ದಿನಗಳಲ್ಲಿ ತಾವು ಪೂರೈಸಲಿರುವ ಅವಧಿಗಿಂತಲೂ ಹೆಚ್ಚು ಅವಧಿ ಸೇವೆ ಸಲ್ಲಿಸುವ ನಾಯಕರು ಬರಬಹುದು. ತಮ್ಮಿಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದಿನ ದಿನಗಳಲ್ಲಿ ಹೊರಹೊಮ್ಮಬಹುದು ಎಂದು ಹೇಳಿದರು.
ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ, ಸಂಪುಟ ಪುನರ್ರಚನೆ ಕುರಿತು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು…







