ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ ದ್ಯಾವರ್ಸ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರ ಅವಧಿಯಲ್ಲಿ ನಿವೇಶನ ರಹಿತರಿಗೆ ಮಂಜೂರಾದ ನಿವೇಶನಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ, ಇಂದಿಗೂ ಸರಿಯಾದ ರಸ್ತೆ ಹಾಗೂ ಬಾಕ್ಸ್ ಚರಂಡಿ ವ್ಯವಸ್ಥೆ ಇಲ್ಲದೆ ದುರ್ವಾಸನೆ ಮತ್ತು ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಈ ಕುರಿತು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, “ಮೂಲಭೂತ ಸೌಕರ್ಯ ನೀಡದಿದ್ದರೆ ಮತವೂ ಇಲ್ಲ” ಎಂದು ನಿವಾಸಿಗಳು ಘೋಷಿಸಿದ್ದಾರೆ.

ನಮ್ಮ ಸುದ್ದಿ ವಿಶ್ವಚೇತನ ಯೂಟ್ಯೂಬ್‌ನಲ್ಲಿ ಪ್ರಸಾರವಾದ ಬೆನ್ನಲ್ಲೇ ಶಾಸಕರ ಸಹಾಯಕರಿಂದ ಪ್ರತಿಕ್ರಿಯೆ ಲಭ್ಯವಾಗಿದೆ.
ಶಾಸಕರ ಆಪ್ತ ಸಹಾಯಕರ ಪ್ರತಿಕ್ರಿಯೆ..
ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ ದ್ಯಾವರ್ಸ ವಠಾರ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ ಕುರಿತು ಸಾರ್ವಜನಿಕ ಚರ್ಚೆ ನಡೆಯುತ್ತಿರುವ ನಡುವೆ, ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಈಗಾಗಲೇ ಮಂಜೂರು ದೊರೆತಿದೆ ಎಂದು ಶಾಸಕರ ಆಪ್ತ ಸಹಾಯಕ ಮಂಜು ಸಣ್ಣಕ್ಕಿ ಅವರು ಮಾಹಿತಿ ನೀಡಿದ್ದಾರೆ.
ಲಭ್ಯವಿರುವ ಅಧಿಕೃತ ದಾಖಲೆಗಳ ಪ್ರಕಾರ, ದ್ಯಾವರ್ಸ ಪ್ರದೇಶದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜು ವೆಚ್ಚ ನಿಗದಿಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಂಬಂಧಿಸಿದ ಇಲಾಖೆಯ ಪಟ್ಟಿಯಲ್ಲಿ ಈ ಕಾಮಗಾರಿಗಳು ಸೇರಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಈ ಕುರಿತು ಮಾತನಾಡಿದ ಶಾಸಕರ ಆಪ್ತ ಸಹಾಯಕ ಮಂಜು ಸಣ್ಣಕ್ಕಿ,
“ದ್ಯಾವರ್ಸ ನಿವಾಸಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕಾಮಗಾರಿಗಳಿಗೆ ಈಗಾಗಲೇ ಮಂಜೂರು ನೀಡಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ” ಎಂದು ತಿಳಿಸಿದ್ದಾರೆ.
ಆದರೆ ಮಂಜೂರು ಘೋಷಣೆಯ ನಡುವೆಯೂ ದ್ಯಾವರ್ಸ ವಠಾರ ನಿವಾಸಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ.ಮಂಜೂರುಗೊಂಡ ಕಾಮಗಾರಿಗಳ ಕಾರ್ಯಾರಂಭ ಯಾವಾಗ?
ಮಳೆಗಾಲದೊಳಗೆ ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆಯೇ?
ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕಾಗಿದೆ?







