ಶಿವಮೊಗ್ಗ: ನಗರದ ದೊಡ್ಡಪೇಟೆ ಠಾಣೆ ಪಕ್ಕದಲ್ಲಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಮೃತರನ್ನು ಮೊಹಮದ್ ಝಕ್ರಿಯ (55) ಎಂದು ಗುರುತಿಸಲಾಗಿದೆ. ಅವರು ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದು, ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ನಿನ್ನೆ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ಮುಗಿಸಿ ಠಾಣೆಗೆ ವಾಪಸಾದ ನಂತರ ಈ ದುರ್ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೃತ ಹೆಡ್ ಕಾನ್ಸ್ಟೇಬಲ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಮುನ್ನ ಅವರು ವಾಟ್ಸಪ್ ಗ್ರೂಪ್ನಲ್ಲಿ ಡೆತ್ನೋಟ್ ಫಾರ್ವರ್ಡ್ ಮಾಡಿರುವುದು ಬೆಳಕಿಗೆ ಬಂದಿದ್ದು, ಅದರಲ್ಲಿ ಠಾಣೆಯ ಕೆಲ ಸಿಬ್ಬಂದಿಗಳಿಂದ ಕಿರುಕುಳ ಎದುರಿಸುತ್ತಿದ್ದುದಾಗಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.


ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಪ್ರತಿಕ್ರಿಯೆ ನೀಡಿದ್ದು,
“ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಕುಟುಂಬದವರು ದೂರು ಸಲ್ಲಿಸಿದ ಬಳಿಕ ಸಂಪೂರ್ಣ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಘಟನೆಯ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.








