ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ, ಶಾಸಕರ ಅಭಿವೃದ್ಧಿ ಕಾರ್ಯಗಳು ಮತ್ತು ಪೊಲೀಸ್ ಕ್ರಮಗಳ ಕುರಿತು ಬಿಜೆಪಿ ಆರೋಪಗಳಿಗೆ ಸ್ಪಷ್ಟ ಉತ್ತರ
ಹೊಸನಗರ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ, ಸ್ಥಳೀಯ ಶಾಸಕರ ಕಾರ್ಯವೈಖರಿ ಹಾಗೂ ತಾಲ್ಲೂಕಿನ ಅಭಿವೃದ್ಧಿ ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಆರೋಪಿಸಿದರು.


ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 17JAN ಹೊಸನಗರ ಬಿಜೆಪಿ ಮಂಡಲದಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆ ಪೂರ್ವನಿಯೋಜಿತ ರಾಜಕೀಯ ತಂತ್ರದ ಭಾಗವಾಗಿದ್ದು, ಅದಕ್ಕೆ ನೀಡಿರುವ ಕಾರಣಗಳು ವಾಸ್ತವಾಧಾರಿತವಲ್ಲವೆಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುತ್ತಿರುವ ಜನಬೆಂಬಲವನ್ನು ಕುಗ್ಗಿಸುವ ಉದ್ದೇಶದಿಂದಲೇ ಬಿಜೆಪಿ ಇಂತಹ ಪ್ರತಿಭಟನೆಗಳನ್ನು ರೂಪಿಸುತ್ತಿದೆ ಎಂದು ಟೀಕಿಸಿದರು.
ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಪೊಲೀಸ್ ಸಿಬ್ಬಂದಿಗಳ ಎದುರೇ ಒಬ್ಬ ವ್ಯಕ್ತಿಯ ಮೇಲೆ ನಾಲ್ಕೈದು ಮಂದಿ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ದೃಶ್ಯಗಳು ಲಭ್ಯವಿದ್ದು, ಕಾನೂನಿನ ಪ್ರಕಾರವೇ ಪ್ರಕರಣ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು. ಹಲ್ಲೆಗೊಳಗಾದವರು ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದವರಾಗಿದ್ದರೂ ಸಹ, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಬಿಜೆಪಿ ಮನಗಂಡಿರಬೇಕು ಎಂದರು. ಈ ಪ್ರಕರಣದಲ್ಲಿ ಶಾಸಕರ ಹಸ್ತಕ್ಷೇಪ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಹೇಳಿದರು.

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೂ ತಿರುಗೇಟು ನೀಡಿದ ಅವರು, ಸರ್ಕಾರದ ಯೋಜನೆಗಳು ಹಾಗೂ ಇಲಾಖಾ ಸೌಲಭ್ಯಗಳನ್ನು ಹೆಚ್ಚು ಪಡೆದಿರುವವರೇ ಬಿಜೆಪಿಗರು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಧಿಕಾರಿಗಳು ಕಾನೂನು ಹಾಗೂ ನಿಯಮಾನುಸಾರವೇ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ತಿಳಿಸಿದರು.


ಬಳ್ಳಾರಿಯಲ್ಲಿ ನಡೆದ ಗಲಭೆಯ ಕುರಿತು ಮಾತನಾಡಿದ ಚಂದ್ರಮೌಳಿ, ಆ ಘಟನೆಯ ಹಿಂದೆಯೂ ಬಿಜೆಪಿಯ ರಾಜಕೀಯ ಪ್ರಚೋದನೆ ಮುಖ್ಯ ಕಾರಣವಾಗಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು. ಬಾಂಗ್ಲಾ ವಲಸಿಗರ ವಿಷಯದಲ್ಲಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಗಡಿ ಭದ್ರತಾ ವ್ಯವಸ್ಥೆ ಕೇಂದ್ರ ಸರ್ಕಾರದ ಅಧೀನದಲ್ಲಿರುವಾಗ ವಲಸಿಗರ ಪ್ರವೇಶಕ್ಕೆ ಕೇಂದ್ರದ ವೈಫಲ್ಯವೇ ಪ್ರಮುಖ ಕಾರಣ ಎಂದು ಹೇಳಿದರು.
ಬಿಜೆಪಿ ಪ್ರತಿಭಟನೆ ನಡೆಸಬೇಕಾದರೆ ಮೊದಲು ಅವರದೇ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಬೇಕು ಎಂದು ಚಂದ್ರಮೌಳಿ ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಹಲವಾರು ಜನಪರ ಯೋಜನೆಗಳನ್ನು ತಿದ್ದುಪಡಿ ಮಾಡಿ, ಬಡವರು, ಹಿಂದುಳಿದ ವರ್ಗಗಳು ಮತ್ತು ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆ ತಂದಿರುವುದನ್ನು ವಿರೋಧಿಸಿ ಮೊದಲು ಬೀದಿಗಿಳಿಯಲಿ ಎಂದು ಸವಾಲು ಹಾಕಿದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, ಮುಖಂಡರಾದ ಪ್ರಭಾಕರ್, ಎಂ.ಪಿ. ಸುರೇಶ್, ಚನ್ನಬಸಪ್ಪ, ಲೋಕೇಶ್, ಚಂದ್ರಶೇಖರ್, ಅಣ್ಣಪ್ಪ, ಶೇಖರಪ್ಪ, ಮಂಜುನಾಥ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ಗುರು ಜಯನಗರ ಮುಂತಾದವರು ಉಪಸ್ಥಿತರಿದ್ದರು.







