ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿ ನಡೆದ ಅಪರೂಪದ ಘಟನೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗೆ ಜಿಂಕೆ ನುಗ್ಗಿದ ಘಟನೆ ನಡೆದಿದೆ. ಗಾಬರಿಗೊಂಡ ಜಿಂಕೆ ಗಾಜಿಗೆ ಗುದ್ದಿಕೊಂಡು ಕುಸಿದು ಬಿದ್ದಿದ್ದು, ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಅರಣ್ಯ ಅಧಿಕಾರಿಗಳು ಜಿಂಕೆಯನ್ನು ಸುರಕ್ಷಿತವಾಗಿ ಹಿಡಿದು ಚಿಕಿತ್ಸೆ ನೀಡಿ ನಂತರ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದರು.


ಪ್ರಾಥಮಿಕ ಮಾಹಿತಿ ಪ್ರಕಾರ, ಬೆನ್ನಟ್ಟಿ ಬಂದ ನಾಯಿಗಳಿಂದ ತಪ್ಪಿಸಿಕೊಳ್ಳಲು ಜಿಂಕೆ ಕುವೆಂಪು ವಿಶ್ವವಿದ್ಯಾಲಯದ ಒಳಭಾಗದಿಂದ ಜಿಗಿದು ಡಿಸಿಸಿ ಬ್ಯಾಂಕಿಗೆ ನುಗ್ಗಿದೆ. ಬ್ಯಾಂಕ್ ಸಿಬ್ಬಂದಿ ತಕ್ಷಣ ಗೇಟ್‌ಗಳನ್ನು ಬಂದ್ ಮಾಡಿ ಜಿಂಕೆಯನ್ನು ಸುರಕ್ಷಿತವಾಗಿರಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.








