ಬೆಂಗಳೂರು: ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಮಾನ್ಯ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ತಾವೇ ಸಿದ್ಧಪಡಿಸಿದ ಭಾಷಣವನ್ನು ಓದಿರುವುದು ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದ್ದು, ಇದು ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಸಂವಿಧಾನದ ಕಲಂ 176 ಮತ್ತು 163ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದಲೇಬೇಕೆಂಬ ನಿಯಮವಿದ್ದು, ತಮ್ಮದೇ ಭಾಷಣವನ್ನು ಓದುವಂತಿಲ್ಲ. ಆದರೆ ಇಂದು ನಡೆದ ವರ್ಷದ ಮೊದಲ ಹಾಗೂ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಈ ಸಂವಿಧಾನಾತ್ಮಕ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ ಎಂದು ಅವರು ತಿಳಿಸಿದರು.
ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ರದ್ದುಪಡಿಸಿ, ‘ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)’ ಎಂಬ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದಕ್ಕೆ ರಾಜ್ಯ ಸರ್ಕಾರದ ತೀವ್ರ ವಿರೋಧವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮನರೇಗಾ ಕಾಯ್ದೆಯಿಂದ ದಲಿತರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ರೈತರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಭದ್ರತೆ ದೊರಕುತ್ತಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಉದ್ಯೋಗದ ಖಾತ್ರಿ ಇಲ್ಲದಿದ್ದು, ಕೇಂದ್ರ ಸರ್ಕಾರವೇ ಕೆಲಸದ ಸ್ಥಳ ಮತ್ತು ಸ್ವರೂಪವನ್ನು ನಿರ್ಧರಿಸುವುದರಿಂದ ಗ್ರಾಮಸಭೆ ಹಾಗೂ ಪಂಚಾಯಿತಿಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯಪಾಲರು ಹೊಸ ಕಾಯ್ದೆಯನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸುತ್ತಿದ್ದು, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಈ ವಿಷಯಗಳನ್ನು ಸಚಿವ ಸಂಪುಟದ ಭಾಷಣದಲ್ಲಿ ಸೇರಿಸಲಾಗಿತ್ತು ಎಂದು ತಿಳಿಸಿದರು.
ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ರದ್ದುಗೊಳಿಸುವುದೇ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲಾಗುವುದು ಎಂದು ಅವರು ಎಚ್ಚರಿಸಿದರು.
ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ವಿತರಿಸಲಾಗಿದ್ದು, ಈ ಕುರಿತು ಕಾನೂನು ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.








