Hosanagara: Humcha – BSNLಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಪ್ರತಿಭಟನೆ ; ಸಂಸದ ಬಿ.ವೈ. ರಾಘವೇಂದ್ರ ಮಧ್ಯಸ್ಥಿಕೆಯಿಂದ ಫ್ಲೆಕ್ಸ್ ತೆರವು

Photo of author

By vishwachetana807@gmail.com

BSNL ನೆಟ್‌ವರ್ಕ್ ಸಮಸ್ಯೆ : ಸಂಸದ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಶಮನ

ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ನಿರಂತರವಾಗಿ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ವಿರುದ್ಧವಾಗಿ ಗ್ರಾಮಸ್ಥರು ಬಿಎಸ್‌ಎನ್‌ಎಲ್ ಪ್ರತಿಕೃತಿಯ ಮೇಲೆ ‘ಬಿಎಸ್‌ಎನ್‌ಎಲ್‌ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಪ್ಲೆಕ್ಸ್ ಅಳವಡಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ಲೆಕ್ಸ್ ಅನ್ನು ಹೊಂಬುಜ ಮಠಕ್ಕೆ ತೆರಳುವ ರಸ್ತೆಯ ಬಳಿ ಅಳವಡಿಸಲಾಗಿತ್ತು.

ವಿಷಯ ಸಂಸದರ ಗಮನಕ್ಕೆ ಬಂದ ತಕ್ಷಣವೇ ಸಂಸದ ಬಿ.ವೈ. ರಾಘವೇಂದ್ರ ಅವರು ತಕ್ಷಣ ಸ್ಪಂದಿಸಿ, ಸಂಬಂಧಪಟ್ಟ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಂಸದರು ಗ್ರಾಮಸ್ಥರಿಗೆ ನೀಡಿದ್ದಾರೆ.

ಸಂಸದರ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಪ್ರತಿಭಟನೆಯ ಸಂಕೇತವಾಗಿ ಅಳವಡಿಸಿದ್ದ ಪ್ಲೆಕ್ಸ್ ಅನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿದ್ದಾರೆ. ನಂತರ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೆಟ್‌ವರ್ಕ್ ಸಮಸ್ಯೆಯ ಪರಿಶೀಲನೆ ನಡೆಸಿದ್ದಾರೆ.

ನೆಟ್‌ವರ್ಕ್ ವ್ಯತ್ಯಯದಿಂದ ವಿದ್ಯಾರ್ಥಿಗಳ ಆನ್‌ಲೈನ್ ಅಧ್ಯಯನ, ರೈತರ ಸಂಪರ್ಕ ವ್ಯವಸ್ಥೆ ಹಾಗೂ ದಿನನಿತ್ಯದ ಕೆಲಸಗಳು ಅಸ್ತವ್ಯಸ್ತಗೊಂಡಿದ್ದರೂ, ಸಂಸದ ರಾಘವೇಂದ್ರ ಅವರ ತ್ವರಿತ ಸ್ಪಂದನೆ ಮತ್ತು ಮಧ್ಯಸ್ಥಿಕೆಯಿಂದ ಸಮಸ್ಯೆ ಶೀಘ್ರ ಪರಿಹಾರವಾಗುವ ವಿಶ್ವಾಸ ಗ್ರಾಮಸ್ಥರಲ್ಲಿ ಮೂಡಿದೆ.

Leave a Comment