Large-scale housing distribution to bring slum residents into the mainstream – CM Siddaramaiah
ಹುಬ್ಬಳ್ಳಿ: ಕೊಳೆಗೇರಿ ಜನರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಬೃಹತ್ ಪ್ರಮಾಣದಲ್ಲಿ ಮನೆಗಳನ್ನು ವಿತರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಡವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರದ ಗ್ಯಾರಂಟಿ ಯೋಜನೆಗಳೇ ಮೂಲ ಉದ್ದೇಶವಾಗಿದೆ ಎಂದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಸರ್ಕಾರ 14,58,000 ಮನೆಗಳನ್ನು ನಿರ್ಮಿಸಿ ವಸತಿ ಕ್ರಾಂತಿ ಮಾಡಿತ್ತು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024ರಲ್ಲಿ ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಿದ್ದೇವೆ. ಈಗ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚಲಾಗುತ್ತಿದೆ ಎಂದು ಅವರು ತಿಳಿಸಿದರು.


ನಾವು ಹೇಳಿದ್ದನ್ನೆಲ್ಲಾ ಮಾಡಿ ನುಡಿದಂತೆ ನಡೆದುಕೊಂಡಿದ್ದೇವೆ. ಆದರೆ ಅವರು ಹೇಳಿದ್ದನ್ನು ಮಾಡದೇ ನಮ್ಮ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದವರು ಹಾಕಿದ್ರಾ ಎಂದು ಪ್ರಶ್ನಿಸಿದರು.

ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿಯೂ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚನೆ ಮಾಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದಕ್ಕೆಲ್ಲಾ ಉತ್ತರಿಸಬೇಕು ಎಂದು ಸಿಎಂ ಹೇಳಿದರು.
ಒಂದು ಮನೆಗೆ ರಾಜ್ಯ ಸರ್ಕಾರವೇ ₹4 ರಿಂದ ₹5 ಲಕ್ಷ ನೀಡುತ್ತದೆ. ಕೇಂದ್ರ ಸರ್ಕಾರ ನೀಡುವುದು ಒಂದು ಲಕ್ಷಕ್ಕಿಂತ ಕಡಿಮೆ. ಆದರೆ ಯೋಜನೆಯ ಹೆಸರು ಮಾತ್ರ ಪ್ರಧಾನಮಂತ್ರಿ ಆವಾಸ್ ಯೋಜನೆ. ಹಣ ನಮ್ಮದು, ಹೆಸರು ಮಾತ್ರ ಕೇಂದ್ರದ್ದು ಎಂದು ಟೀಕಿಸಿದರು.

ನಮ್ಮ ಸರ್ಕಾರ ಬಂದ ಬಳಿಕ ಎರಡು ವರ್ಷದಲ್ಲಿ ವಸತಿ ಯೋಜನೆಗಳಿಗೆ ₹5,500 ಕೋಟಿ ಖರ್ಚು ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಬಿಜೆಪಿ ಸುಳ್ಳು ಹಂಚುತ್ತಿದೆ. ರೈತರ ಪಂಪ್ ಸೆಟ್‌ಗಳಿಗೆ ವರ್ಷಕ್ಕೆ ₹2,500 ಕೋಟಿ ಸಬ್ಸಿಡಿ ನೀಡಲಾಗುತ್ತಿದೆ. ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಎಲ್ಲಾ ಕಲ್ಯಾಣ ಯೋಜನೆಗಳಿಗೆ ನಿರಂತರವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯವೂ ಮತ್ತು ನಮ್ಮ ಸರ್ಕಾರವೂ ಸದೃಢವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಮಾತುಗಳನ್ನು ಅವರು ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ನೂತನ ಮನೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಹೇಳಿದರು.








