ಮೈಸೂರಿನಲ್ಲಿ ಸಿದ್ದರಾಮಯ್ಯ: ಹೂಡಿಕೆ, ರಾಜ್ಯಪಾಲರ ಭಾಷಣ, ಸ್ತಬ್ಧಚಿತ್ರ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಹೇಳಿಕೆ

Photo of author

By vishwachetana807@gmail.com

ಮೈಸೂರು: ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಉಪಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರು ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಲಭ್ಯವಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ಶೇಕಡಾ 100 ಉದ್ಯೋಗ ದೊರೆಯುತ್ತಿದೆ ಎಂದು ಅವರು ತಿಳಿಸಿದರು.

ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಸಂವಿಧಾನದ 176 ಮತ್ತು 163ನೇ ವಿಧಿಗಳ ಪ್ರಕಾರ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸರ್ಕಾರ ನೀಡಿದ ಭಾಷಣವನ್ನು ಓದಲೇಬೇಕು. ನಾವು ಬರೆದುಕೊಟ್ಟ ಭಾಷಣವನ್ನು ಅವರು ಬದಲಾಯಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದೊಂದಿಗೆ ಎಲ್ಲಾ ಪತ್ರ ವ್ಯವಹಾರ ನಡೆದಿದ್ದರೂ ಆಯ್ಕೆ ಮಾಡದಿರುವುದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜ್ವಲ್ ರೇವಣ್ಣ ಅವರ ಬಂಧನ ಕಾನೂನಿನ ಪ್ರಕಾರ ನಡೆದಿದ್ದು, ಸರ್ಕಾರ ಯಾವುದೇ ಪ್ರಕರಣದಲ್ಲಿಯೂ ಮಧ್ಯಪ್ರವೇಶ ಮಾಡುವುದಿಲ್ಲ. ಅಧಿಕಾರಿಗಳಿಗೆ ಸರ್ಕಾರ ಬಹುಮಾನ ನೀಡಿದೆ ಎನ್ನುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು. “ನಮಗೂ ಸಮಯ ಬರುತ್ತದೆ” ಎಂಬ ಎಚ್.ಡಿ. ದೇವೇಗೌಡರ ಹೇಳಿಕೆಯ ಅರ್ಥ ನಮಗೆ ತಿಳಿದಿಲ್ಲ. 17 ಸ್ಥಾನ ಪಡೆದಿರುವವರು ಅಧಿಕಾರಕ್ಕೆ ಹೇಗೆ ಬರುತ್ತಾರೆ? ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ 140 ಸ್ಥಾನಗಳನ್ನು ಗಳಿಸಿದೆ. 2028ರಲ್ಲೂ ನಾವು ಅಧಿಕಾರದಲ್ಲೇ ಮುಂದುವರಿಯುವ ಭರವಸೆ ಇದೆ. ಜೆಡಿಎಸ್ ಮತ್ತು ಬಿಜೆಪಿಯವರು ಮೈತ್ರಿ ಮಾಡಿಕೊಂಡರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

— ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Leave a Comment