ದೀವರು ಹಸೆ ಚಿತ್ತಾರ ಕಲೆಯನ್ನು ಶಾಲಾ ಪಠ್ಯಕ್ರಮಕ್ಕೆ ಸೇರಿಸಲಾಗುವುದು: ಸಚಿವ Madhu Bangarappa

Photo of author

By vishwachetana807@gmail.com

ಸಾಗರ/ಬಲೆಗಾರು:
‘ಮಲೆನಾಡಿನ ದೀವರು ಸಮುದಾಯ ಪೋಷಿಸಿಕೊಂಡು ಬಂದಿರುವ ಹಸೆ ಚಿತ್ತಾರ ಕಲೆಯನ್ನು ಶಾಲೆಗಳ ಪಠ್ಯಕ್ರಮದಲ್ಲಿ ಸೇರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಸಾಗರ ತಾಲೂಕಿನ ಬಲೆಗಾರು ಗ್ರಾಮದಲ್ಲಿ ಭಾನುವಾರ ಕರ್ನಾಟಕ ದೀವರು ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಚಾಲನೆ ಹಾಗೂ ದೀವರು ಹಸೆ ಚಿತ್ತಾರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಸೆ ಚಿತ್ತಾರದಂತಹ ಕಲೆ ಸಾವಿರಾರು ವರ್ಷಗಳಿಂದ ಮಹಿಳೆಯರು ಕಾಪಿಟ್ಟುಕೊಂಡು ಬಂದಿರುವ ಕರ್ನಾಟಕದ ನೆಲಮೂಲದ ಕಲೆಯಾಗಿದ್ದು, ಇದರ ಪ್ರೋತ್ಸಾಹ ಮತ್ತು ನಮ್ಮ ಸಂಸ್ಕೃತಿ-ಕಲೆಗಳ ಉಳಿವಿಗೆ ಸಂಸ್ಥೆಯ ಪ್ರಯತ್ನಗಳಿಗೆ ಕೈಜೋಡಿಸುವುದಾಗಿ ಸಚಿವರು ಭರವಸೆ ನೀಡಿದರು.

ಇದಕ್ಕೂ ಮೊದಲು ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಮಾಜಿ ಸಭಾಪತಿ ಡಾ. ಕಾಗೋಡು ತಿಮ್ಮಪ್ಪ, “ಹೊಸ ತಲೆಮಾರು ಇಂತಹ ಕ್ಯಾಲೆಂಡರ್ ಮೂಲಕ ಸಂಸ್ಕೃತಿಯನ್ನು ಉಳಿಸುತ್ತಿರುವುದು ಹಾಗೂ ಹಿಂದಿನ ಹೋರಾಟಗಳನ್ನು ಸ್ಮರಿಸುವುದು ಶ್ಲಾಘನೀಯ” ಎಂದರು.

ಈ ಸಂದರ್ಭದಲ್ಲಿ ದೀವರು ಹಸೆ ಚಿತ್ತಾರ ಕಲಾವಿದೆಯರಾದ ಲಕ್ಷ್ಮಮ್ಮ ಗಡೆಮನೆ, ರಾದಾ ಸುಳ್ಳೂರು, ಸ್ವಾತಿ ಪುನೀತ್ ಹಾಗೂ ಪವಿತ್ರಾ ಮೋಹನ್ ನಾಯ್ಕ್ ಅವರನ್ನು ಗೌರವಿಸಲಾಯಿತು.

ರೈತ ಹೋರಾಟಗಾರ ಶಿವಾನಂದ ಕುಗ್ವೆ, ಈಶ್ವರ ನಾಯ್ಕ, ಎಸ್.ಪಿ. ಕೆರಿಯಪ್ಪ, ಸಂಧ್ಯಾ ಸಿಗಂದೂರು, ವಿದ್ಯಾ ಸುಳ್ಳಳ್ಳಿ ಉಪಸ್ಥಿತರಿದ್ದರು.
ದಿವ್ಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಂಸ್ಥೆಯ ಸಂಚಾಲಕ ವೆಂಕಟೇಶ್ ಮೆಳವರು ಎಲ್ಲರನ್ನು ವಂದಿಸಿದರು.

Leave a Comment