ʼಹಿಂದೂಗಳೆಲ್ಲ ಒಂದೇʼಎನ್ನುವ ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತ; ನೂರು ವರ್ಷದ ಕಾರ್ಯಕ್ರಮವೇನು? ಸಂವಾದಕ್ಕೆ ಕಿಮ್ಮನೆ ರತ್ನಾಕರ ಕರೆ
ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಷ್ಟ್ರಗೀತೆ ವೇಳೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ತೋರಿಸದೇ ಹೊರಟು ಹೋಗಿರುವುದು ಅಸಂಬದ್ಧವಾಗಿದೆ. ಅವರು ದೇಶದ ಮುಂದೆ ಕ್ಷಮೆ ಕೇಳುವ ಜೊತೆಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಒತ್ತಾಯಿಸಿದರು.

ನರೇಗಾ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ (ವಿಬಿ–ಜಿ ರಾಮ್ ಜಿ) ಮಸೂದೆ ಅಂಗೀಕಾರದಿಂದ ಗ್ರಾಮ ಪಂಚಾಯಿತಿಗಳ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುತ್ತಿಗೆದಾರರ ಮೂಲಕವೇ ಕೆಲಸ ನಡೆಯಲಿದೆ. ಇದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರ ಎಂದು ಅವರು ಹೇಳಿದರು.

ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಬದಲು ಜಾತಿ ಮತ್ತು ಧರ್ಮದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವ ಅಗತ್ಯ ಏನು ಎಂಬುದರ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯವಾಗಿದೆ ಎಂದು ಅವರು ಹೇಳಿದರು.
“ಕೇಂದ್ರದ ಆರ್ಥಿಕ ನೀತಿಯಿಂದ ದೇಶ ಸಂಪೂರ್ಣ ನಾಶವಾಗಲಿದೆ. ಹಸಿವಿಗಿಂತ ದೊಡ್ಡ ಶಿಕ್ಷೆ ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಕಾರ್ಯಕ್ರಮ ರೂಪಿಸಬೇಕು. ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಆದರೆ, ನರೇಗಾ ಯೋಜನೆ ರದ್ದು ಮಾಡುವ ಮೂಲಕ ಉದ್ಯೋಗ ಸೃಷ್ಟಿಯ ಅವಕಾಶವನ್ನೇ ಕಸಿದುಕೊಳ್ಳಲಾಗಿದೆ,” ಎಂದು ಕಿಮ್ಮನೆ ರತ್ನಾಕರ ಹೇಳಿದರು.


“ನೂರು ವರ್ಷದ ಇತಿಹಾಸದಲ್ಲಿ ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಬಜರಂಗದಳ ‘ಹಿಂದೂ ಎಲ್ಲರೂ ಒಂದೇ’ ಎಂದು ಹೇಳಲು ಯಾವ ಕಾರ್ಯಕ್ರಮ ರೂಪಿಸಿದ್ದಾರೆ? ಅಶ್ಪೃಶ್ಯತೆ ನಿವಾರಣೆಗೆ ಏನು ಮಾಡಿದ್ದಾರೆ?” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.
ನಾನು ಹಿಂದೂ ಸಮಾಜದ ನ್ಯೂನತೆಗಳ ವಿರುದ್ಧವಾಗಿದ್ದು, ಸಮಾಜ ಉಳಿಯಬೇಕು ಹಾಗೂ ಬೆಳೆಯಬೇಕು ಎಂಬುದು ನನ್ನ ಆಶಯ. ವೇದ–ಉಪನಿಷತ್ತನ್ನೂ ಓದಿದ್ದೇನೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆ ವಿರುದ್ಧ ಏನು ಮಾಡಿದ್ದಾರೆ ಎಂಬುದಕ್ಕೆ ಉತ್ತರ ನೀಡಬೇಕು. ಈ ಬಗ್ಗೆ ಸಂವಾದ ಆಯೋಜಿಸಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.
ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ ಅಂತರ್ಜಾತಿ ವಿವಾಹಕ್ಕೆ ಎಷ್ಟು ಉತ್ತೇಜನ ನೀಡಲಾಗಿದೆ? ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರು ಈ ವಿಷಯವಾಗಿ ಮಾತನಾಡಿದ್ದಾರೆ. ಆದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪಾತ್ರವೇನು ಎಂಬುದನ್ನು ಜನರಿಗೆ ತಿಳಿಸಬೇಕು. ಇತಿಹಾಸದ ಪುಸ್ತಕಗಳನ್ನು ಓದದೇ ಕೆಲವರು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಆದರ್ಶ ಹುಂಚದ ಕಟ್ಟೆ ಉಪಸ್ಥಿತರಿದ್ದರು.








