Shivamogga: Private bus catches fire, three injured in burn injuries
ಶಿವಮೊಗ್ಗ: ಸುಡೂರು ಖಾಸಗಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮಾರ್ಗ ಮಧ್ಯೆಯೇ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ.


ಹೊಸನಗರ ತಾಲ್ಲೂಕಿನ ನಿಟ್ಟೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಈ ಬಸ್‌ನಲ್ಲಿ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು. ಬೆಂಗಳೂರಿನ ಅನ್ನಪೂರ್ಣ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್, ರಾತ್ರಿ ನಿಟ್ಟೂರಿನಿಂದ ಹೊರಟು ನಗರ, ಹೊಸನಗರ, ರಿಪ್ಪನ್ ಪೇಟೆ ಮೂಲಕ ಶಿವಮೊಗ್ಗದತ್ತ ಬರುವಾಗ ಅರಸಾಳು–ಸೂಡೂರು ಬಳಿಯ ಒಂಬತ್ತನೇ ಮೈಲಿಗಲ್ಲು ಕಾಡಿನ ಮಧ್ಯೆ ಬೆಂಕಿ ಕಾಣಿಸಿಕೊಂಡಿದೆ.

ಆರಂಭದಲ್ಲಿ ತಾಂತ್ರಿಕ ದೋಷದಿಂದ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿ ಬಸ್ ನಿಂತಿದೆ. ಬಳಿಕ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಇದರಿಂದ ದೊಡ್ಡ ಅವಘಡ ತಪ್ಪಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾರಿಗೂ ಜೀವಪಾಯವಾಗಿಲ್ಲ.
ರಿಪ್ಪನ್ ಪೇಟೆ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಬಸ್‌ನಲ್ಲಿದ್ದವರಿಗೆ ನೆರವಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ
ಖಾಸಗಿ ಬಸ್ ಬೆಂಕಿ ಅವಘಡದಲ್ಲಿ ಗಾಯಗೊಂಡ 11 ಮಂದಿ ಪ್ರಯಾಣಿಕರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಬೆಂಕಿಯ ತೀವ್ರತೆಗೆ ಮೂವರಿಗೆ ಸುಟ್ಟ ಗಾಯಗಳಾಗಿದ್ದು, ಇಬ್ಬರಿಗೆ ತಲೆಗೆ ಪೆಟ್ಟಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಟಿ.ಡಿ. ತಿಮ್ಮಪ್ಪ ತಿಳಿಸಿದ್ದಾರೆ.








