ಹೊಸನಗರ: ನಿಟ್ಟೂರಿನಲ್ಲಿ ರಾತ್ರಿ ಕತ್ತಲೆ ದೂರ ಮಾಡಿದ ಹೈ-ಮಾಸ್ಕ್ ದೀಪಗಳು; ಶಾಸಕ ಬೇಳೂರು ಗೋಪಾಲಕೃಷ್ಣ ಕಾರ್ಯಕ್ಕೆ ಶ್ಲಾಘನೆ

Photo of author

By vishwachetana807@gmail.com

ಹೊಸನಗರ: ತಾಲೂಕಿನ ನಾಗೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಟ್ಟೂರಿನಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೈ-ಮಾಸ್ಕ್ ದೀಪಗಳನ್ನು ಅಳವಡಿಸಲಾಗಿದ್ದು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕತ್ತಲೆಯಲ್ಲಿ ಮುಳುಗಿದ್ದ ಪ್ರಮುಖ ಸ್ಥಳಗಳು ಈಗ ಬೆಳಕಿನಿಂದ ಕಂಗೊಳಿಸುತ್ತಿವೆ.

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ, ದಟ್ಟ ಅರಣ್ಯ ಮತ್ತು ಮಲೆನಾಡಿನ ಭಾಗವಾಗಿರುವ ನಾಗೋಡಿ ಗ್ರಾಮವು ಭೌಗೋಳಿಕವಾಗಿ ವಿಶಿಷ್ಟವಾಗಿದೆ. ಇಲ್ಲಿನ ನಿಟ್ಟೂರು ಭಾಗವು ಸುತ್ತಮುತ್ತಲಿನ ಹಲವು ಹಳ್ಳಿಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದ್ದು, ಇಲ್ಲಿನ ರಸ್ತೆಗಳು ರಾತ್ರಿ ವೇಳೆ ಕತ್ತಲೆಯಿಂದ ಕೂಡಿರುತ್ತಿದ್ದವು. ಭೌಗೋಳಿಕವಾಗಿ ಅರಣ್ಯದ ಅಂಚಿನಲ್ಲಿರುವ ಕಾರಣ, ಸಾರ್ವಜನಿಕರು ರಾತ್ರಿ ವೇಳೆ ಸಂಚರಿಸಲು ಹಿಂದೆ ಹಿಂಜರಿಯುತ್ತಿದ್ದರು.

ಕ್ಷೇತ್ರದ ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ ಅವರು ಈ ಭಾಗದ ಜನರ ಭೌಗೋಳಿಕ ಸವಾಲುಗಳು ಮತ್ತು ಅಗತ್ಯತೆಯನ್ನು ಮನಗಂಡು, ತಮ್ಮ ವಿಶೇಷ ಅನುದಾನದಡಿ ಈ ಕಾಮಗಾರಿಗೆ ಹಣ ಮಂಜೂರು ಮಾಡಿದ್ದರು.  ನಿಟ್ಟೂರಿನ ಕೆನರಾ ಬ್ಯಾಂಕ್-ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ, ತೂಗು ಸೇತುವೆ ರಸ್ತೆಯ ಅಡಿಕೆಶಿನಿ ಸರ್ಕಲ್, ಮತ್ತು ಜಾಮಿಯ ಮಸೀದಿಯ ಸಮೀಪ ಹೀಗೆ ಪ್ರಮುಖ ಮೂರು ಸ್ಥಳಗಳಲ್ಲಿ ಅತ್ಯಾಧುನಿಕ ಹೈ-ಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ.

ಈ ಕಾಮಗಾರಿಯ ಮಹತ್ವವನ್ನು ವಿವರಿಸಿದ ನಿಟ್ಟೂರು ಗ್ರಾ.ಪಂ. ನಿಕಟಪೂರ್ವ ಸದಸ್ಯರಾದ ನಾಗೋಡಿ ವಿಶ್ವನಾಥ್, “ಹೈ-ಮಾಸ್ಕ್ ದೀಪಗಳಿಂದಾಗಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಭದ್ರತೆಯ ಅನುಭವವಾಗಿದೆ. ಇದೊಂದು ದೀರ್ಘಕಾಲದ ಬೇಡಿಕೆಯಾಗಿದ್ದರಿಂದ, ಜನರು ಈಗ ನಿರಾಳವಾಗಿದ್ದಾರೆ. ಅನುದಾನ ನೀಡಿ ಸಹಕರಿಸಿದ ಶಾಸಕರಿಗೆ ಮತ್ತು ಅವರ ತಂಡಕ್ಕೆ ಗ್ರಾಮಸ್ಥರ ಪರವಾಗಿ ಹೃದಯಪೂರ್ವಕ ಧವಾದಗಳನ್ನು ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಈ ಕಾಮಗಾರಿಯ ಅನುಷ್ಠಾನದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀ ಮಂಜು ಸಣ್ಣಕ್ಕಿ ಹಾಗೂ ನಗರ ಹೋಬಳಿಯ ಯುವನಾಯಕ ಶ್ರೀ ಮಾಸ್ತಿಕಟ್ಟೆ ಸುಬ್ರಮಣ್ಯ ಅವರು ಶ್ರಮಿಸಿದ್ದು, ಅವರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಬರಹ: ತಂಡ, vishwachetana.com

Leave a Comment