ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ಗಳ ಮೇಲೆ ಅಂಟಿಸಲಾದ ಜಾಹೀರಾತುಗಳನ್ನು ಸಾರ್ವಜನಿಕರು ಕಾನೂನುಬಾಹಿರವಾಗಿ ಕಿತ್ತುಹಾಕಿದರೆ ಅಂತಹವರ ವಿರುದ್ಧ ಪೊಲೀಸ್ ದೂರು (FIR) ದಾಖಲಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಬಸ್ಗಳ ಮೇಲೆ ಪ್ರದರ್ಶಿಸಲಾಗುತ್ತಿದ್ದ ತಂಬಾಕು ಉತ್ಪನ್ನಗಳ ಜಾಹೀರಾತುಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಪೋಸ್ಟರ್ಗಳನ್ನು ಹರಿದು ಹಾಕುತ್ತಿದ್ದ ಹಿನ್ನೆಲೆಯಲ್ಲಿ ನಿಗಮ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಸಾರ್ವಜನಿಕರಿಗೆ ಎಚ್ಚರಿಕೆ ಫೆಬ್ರವರಿ 7 ರಂದು ಸುತ್ತೋಲೆ ಹೊರಡಿಸಿರುವ ವ್ಯವಸ್ಥಾಪಕ ನಿರ್ದೇಶಕರು, “ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಅಥವಾ ಅನಧಿಕೃತವಾಗಿ ಜಾಹೀರಾತುಗಳನ್ನು ಕಿತ್ತರೆ ಅಂತಹವರ ವಿರುದ್ಧ ದೂರು ನೀಡಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.


ತಂಬಾಕು ಜಾಹೀರಾತು ತೆರವಿಗೆ ಗಡುವು
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆಯ ಮೇರೆಗೆ, ತಂಬಾಕು ಪ್ರಚೋದಿಸುವ ಎಲ್ಲಾ ನೇರ ಮತ್ತು ಪರೋಕ್ಷ ಜಾಹೀರಾತುಗಳನ್ನು ತೆರವುಗೊಳಿಸಲು ನಿಗಮ ಕ್ರಮ ಕೈಗೊಂಡಿದೆ. ಫೆಬ್ರವರಿ 15ರ ಒಳಗಾಗಿ ಎಲ್ಲಾ ಬಸ್ಗಳಿಂದ ಇಂತಹ ಪೋಸ್ಟರ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಗಡುವು ನೀಡಲಾಗಿದೆ.
ದೂರು ಸಲ್ಲಿಸುವುದು ಹೇಗೆ? ಇನ್ನು ಮುಂದೆ ಜಾಹೀರಾತುಗಳ ವಿಷಯದಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ASCI) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ನಿಗಮ ತಿಳಿಸಿದೆ. ಜಾಹೀರಾತುಗಳ ಬಗ್ಗೆ ಸಾರ್ವಜನಿಕರಿಗೆ ದೂರುಗಳಿದ್ದರೆ, ಅದನ್ನು ಲಿಖಿತ ರೂಪದಲ್ಲಿ ಇಲಾಖೆಗೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರಹ: ತಂಡ, vishwachetana.com







