ರಾಹುಲ್ ಗಾಂಧಿ ಫೋಟೋ ಎಡಿಟ್ ಮಾಡಿ ಅವಹೇಳನ: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ನ್ಯಾಯಾಂಗ ಬಂಧನಕ್ಕೆ

Photo of author

By vishwachetana807@gmail.com

ಹೊಸನಗರ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ಹಾಗೂ ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಬಂಧಿತ ಆರೋಪಿಯಾಗಿದ್ದಾರೆ. ಇಲ್ಲಿನ ಜೆ.ಎಂ.ಎಫ್.ಸಿ (JMFC) ನ್ಯಾಯಾಲಯವು ಆರೋಪಿಗೆ ಫೆಬ್ರವರಿ 24, 2026 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ: ಆರೋಪಿ ರಾಜೇಶ್ ಹಿರಿಮನೆ ಅವರು ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನೆಯ ಸಮವಸ್ತ್ರ ಧರಿಸಿದ ಅಧಿಕಾರಿ ‘ಅಸಿಮ್’ (ASIM) ಎಂಬುವರ ಫೋಟೋವನ್ನು ಎಡಿಟ್ ಮಾಡಿ ಒಂದಕ್ಕೊಂದು ಸೇರಿಸಿದ್ದರು. ಈ ವಿವಾದಾತ್ಮಕ ಚಿತ್ರಕ್ಕೆ “ONE AGENDA” ಎಂಬ ಟ್ಯಾಗ್ ಲೈನ್ ನೀಡಿ ಫೇಸ್‌ಬುಕ್‌ನಲ್ಲಿ ಹರಿಬಿಡಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಆಕ್ಷೇಪಾರ್ಹ ಪೋಸ್ಟ್ ಗಮನಿಸಿದ ಹೊಸನಗರ-ನಗರ ಪೊಲೀಸರು, ಮೇ 20, 2025 ರಂದೇ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ಸ್ವಯಂ ಪ್ರೇರಿತ (Suo Moto) ದೂರು ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ರಾಜಕೀಯ ಸಂಚಲನ:ಬಂಧಿತ ವ್ಯಕ್ತಿ ಮಾಜಿ ಗೃಹ ಸಚಿವರೂ ಆದ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಆಗಿರುವುದರಿಂದ, ಈ ಪ್ರಕರಣವು ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬರಹ: ತಂಡ, vishwachetana.com

Leave a Comment