ಇ-ಸ್ವತ್ತು 2.0 ಮೂಲಕ 27,000ಕ್ಕೂ ಹೆಚ್ಚು ಆಸ್ತಿ ದಾಖಲಾತಿ ಅರ್ಜಿ ಸಲ್ಲಿಕೆ: ಸಚಿವ ಪ್ರಿಯಾಂಕ್ ಖರ್ಗೆ

Photo of author

By vishwachetana807@gmail.com

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿ ದಾಖಲಾತಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಇ-ಸ್ವತ್ತು 2.0 (E-Swathu 2.0) ತಂತ್ರಾಂಶಕ್ಕೆ ನಾಗರಿಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ನೂತನ ತಂತ್ರಾಂಶದ ಮೂಲಕ ಇದುವರೆಗೆ 27,000ಕ್ಕೂ ಹೆಚ್ಚು ನಮೂನೆ-11ಬಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

​ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಇ-ಸ್ವತ್ತು ತಂತ್ರಾಂಶವನ್ನು ಪರಿಷ್ಕರಿಸಿ, ದಿನಾಂಕ 01-12-2025 ರಂದು ಅಧಿಕೃತವಾಗಿ ಉದ್ಘಾಟಿಸಲಾಗಿತ್ತು. ಮುಖ್ಯವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ (26,000 ಅರ್ಜಿಗಳು) ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಏಪ್ರಿಲ್ 7, 2025 ಕ್ಕಿಂತ ಹಿಂದಿನ ಆಸ್ತಿಗಳಿಗೆ ಅವಕಾಶ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ಜಾರಿಗೆ ಬಂದ ದಿನಾಂಕವಾದ 07-04-2025 ಕ್ಕಿಂತ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡಗಳು ಮತ್ತು ನಿವೇಶನಗಳಿಗೆ 2-ಖಾತಾ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ Citizen Interface ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮೇಲ್ಮನವಿ ಮತ್ತು ಅನುಮೋದನಾ ಪ್ರಕ್ರಿಯೆ
ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಡಲ್ಪಟ್ಟ ಆಸ್ತಿಗಳು ಅಥವಾ ಪಂಚಾಯತಿಯ ತೀರ್ಮಾನದಿಂದ ಬಾಧಿತರಾದ ವ್ಯಕ್ತಿಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO) ಮೇಲ್ಮನವಿ ಸಲ್ಲಿಸಬಹುದು. ಅರ್ಜಿಗಳ ನೈಜತೆಯನ್ನು ಪರಿಶೀಲಿಸಲು ಗ್ರಾಮ ಪಂಚಾಯತಿಯ ಪಿಡಿಒ ಹಾಗೂ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳ ಮೂಲಕ CEO ಅನುಮೋದನೆಗೆ ಸಲ್ಲಿಸಲಾಗುತ್ತಿದೆ.

ಅನುಮೋದನಾ ಪ್ರಕ್ರಿಯೆಯ ಕಾರಣಕ್ಕೆ ಅರ್ಜಿಗಳ ವಿಲೇವಾರಿಯಲ್ಲಿ ಕೊಂಚ ವಿಳಂಬವಾಗಿದ್ದು, CEO ಅನುಮೋದನೆ ನೀಡಿದ ನಂತರ 15 ಕೆಲಸದ ದಿನಗಳ ಒಳಗೆ ಗ್ರಾಮ ಪಂಚಾಯತಿಗಳಿಂದ ನಮೂನೆ-11ಬಿ ಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

EC ಸಲ್ಲಿಕೆಯಲ್ಲಿ ಎಚ್ಚರವಿರಲಿ
ಋಣಭಾರ ಪ್ರಮಾಣಪತ್ರ (EC) ಸಲ್ಲಿಕೆಯ ಕುರಿತು ಸ್ಪಷ್ಟನೆ ನೀಡಿರುವ ಇಲಾಖೆ, ನೋಂದಾಯಿತ ಪತ್ರದ ದಿನಾಂಕ 01-04-2004 ಕ್ಕಿಂತ ಮುಂಚಿನದಾಗಿದ್ದಲ್ಲಿ, 2004 ಕ್ಕಿಂತ ಮೊದಲು ಮತ್ತು ನಂತರದ ಎರಡು ಅವಧಿಗಳ EC ಯನ್ನು ಸಲ್ಲಿಸಬೇಕು. ಒಂದು ವೇಳೆ ಅರ್ಜಿದಾರರು ಸಲ್ಲಿಸಿದ EC ಯಲ್ಲಿ ನೋಂದಾಯಿತ ಪತ್ರದ ಸಂಖ್ಯೆ (Document Number) ಇಲ್ಲದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಬರಹ: ತಂಡ, vishwachetana.com

Leave a Comment