ಹೊಸನಗರ: ತಾಲೂಕಿನ ಹೃದಯಭಾಗದಲ್ಲಿರುವ ಕಲ್ಲುಹಳ್ಳ ಸೇತುವೆಯ ರಕ್ಷಣಾ ಗೋಡೆ ಕುಸಿದು ಎರಡು ವರ್ಷ ಕಳೆದರೂ ದುರಸ್ತಿ ಕಾಣದೇ, ವಾಹನ ಸವಾರರು ಮತ್ತು ಪಾದಚಾರಿಗಳ ಜೀವಕ್ಕೆ ಅಪಾಯವನ್ನು ಆಹ್ವಾನಿಸುತ್ತಿದೆ.
ಬೈಂದೂರು – ರಾಣೇಬೆನ್ನೂರ್ ಸಂಪರ್ಕ ಕಲ್ಪಿಸುವ ಪ್ರಮುಖ 766c ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ತಡೆಗೋಡೆ ಇಲ್ಲದ ಕಾರಣ, ವಾಹನ ಸವಾರರು ಜೀವದ ಹಂಗು ತೊರೆದು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಆಡಳಿತದ ನಿರ್ಲಕ್ಷ್ಯ:
ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು, ದುರಸ್ತಿ ಕಾರ್ಯ ನಡೆಯುತ್ತಿದ್ದರೂ, ಕುಸಿದಿರುವ ತಡೆಗೋಡೆಯನ್ನು ನಿರ್ಮಿಸುವ ಕಾರ್ಯ ಮಾತ್ರ ನಡೆಯದಿರುವುದು ವಿಪರ್ಯಾಸ. ಈ ಬಗ್ಗೆ ತಾಲೂಕು ಆಡಳಿತವಾಗಲಿ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದೆ ಅಮಾಯಕರ ಬಲಿ ಪಡೆಯಲು ದಾರಿ ಮಾಡಿಕೊಟ್ಟಂತೆ ವರ್ತಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.


ಸ್ಥಳೀಯರ ಅಳಲು:
“ಈ ಸೇತುವೆ ಮೇಲೆ ದಿನನಿತ್ಯ ಓಡಾಡಲು ನಮಗೆ ಭಯವಾಗುತ್ತಿದೆ. ನಗರದಿಂದ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ತಡೆಗೋಡೆ ಕುಸಿದು ಎರಡು ವರ್ಷ ಕಳೆದರೂ ನಿರ್ಮಾಣ ಮಾಡದಿರೋದು ಬೇಸರದ ಸಂಗತಿ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನಹರಿಸಿ ಆದಷ್ಟು ಬೇಗ ಮುಕ್ತಿ ಸಿಗುವಂತೆ ಮಾಡಲಿ.”
— ಪ್ರಶಾಂತ್, ಸ್ಥಳೀಯ ನಿವಾಸಿ

ಬರಹ: ತಂಡ, vishwachetana.com







