ಸವಿನುಡಿಯಿಂದ ಮಾತ್ರವೇ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ: ಮಳಲಿ ಶ್ರೀ

Photo of author

By vishwachetana807@gmail.com

ಹೊಸನಗರ: “ನಮ್ಮ ಮಾತಿನ ಹಿಂದೆ ಮನಸ್ಸು ಸದಾ ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಶಾಂತ ಹಾಗೂ ಹತೋಟಿಯಲ್ಲಿ ಇಟ್ಟುಕೊಂಡರೆ ಮಾತು ಉತ್ತಮವಾಗಿರುತ್ತದೆ. ಸವಿನುಡಿ ಎಲ್ಲರ ಬದುಕಿಗೆ ನೆಮ್ಮದಿ ತರುತ್ತದೆ” ಎಂದು ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪದ ಮಳಲಿ ಮಠದ ಶ್ರೀ ಡಾ. ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಗ್ರಾಮದ ಶ್ರೀ ಈಶ್ವರ, ಬಸವಣ್ಣ ಹಾಗೂ ನಾಗದೇವತೆ ಪರಿವಾರ ದೇವರ 11ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜನಜಾಗೃತಿ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶ್ರೀಗಳ ಬೋಧನೆ:“ಮಾತು ಬೆಳ್ಳಿ – ಮೌನ ಬಂಗಾರ ಎಂಬ ಮಾತು ಸತ್ಯವಾದುದು. ಮಾತು ಮೌಲ್ಯದಿಂದ ಕೂಡಿದ್ದಾದರೆ ಯಾವುದೇ ತೊಂದರೆಯಾಗದು. ಆದರೆ ಬಿರುನುಡಿಯಾದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಅದೃಷ್ಟ ಎಂದರೆ ಅವಕಾಶ ಪಡೆಯುವುದು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು. ಪ್ರತಿಯೊಬ್ಬರೂ ಬದುಕಿನಲ್ಲಿ ಸದಾವಕಾಶಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಶ್ರೀಗಳು ನುಡಿದರು.

​ರ್ಯಾಂಕ್ ವಿಜೇತ ವಿದ್ಯಾರ್ಥಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಆಹಾರ ಸಂಸ್ಕರಣಾ ವಿಭಾಗದ ಎಂ.ಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಸ್ಥಳೀಯ ಪ್ರತಿಭೆ ಗಗನ್ ಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಅಭಿವೃದ್ಧಿ ಕಾರ್ಯಕ್ಕೆ ಸತೀಶ್ ಕೊಳಗಿ ಮನವಿ:
ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕೊಳಗಿ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲಾ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು. ವಿಶೇಷವಾಗಿ ದೇವಸ್ಥಾನಕ್ಕೆ ಮತ್ತು ಊರಿನ ಅಭಿವೃದ್ಧಿಗೆ ಅನುದಾನ ನೀಡಿ ಸಹಕರಿಸಿದ ಶಾಸಕರಿಗೂ ಹಾಗೂ ಅವರ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತ ಗ್ರಾಮಸ್ಥರಿಗೂ ಅಭಿನಂದನೆ ಸಲ್ಲಿಸಿದರು. “ಪಕ್ಕದಲ್ಲಿರುವ ನಾರಾಯಣ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಮಾಡಬೇಕಿದೆ. ಕೆಲವು ಅಡೆತಡೆಗಳಿಂದಾಗಿ ಈವರೆಗೆ ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಈಗ ಅಭಿವೃದ್ಧಿ ಕಾರ್ಯವನ್ನು ಶುರು ಮಾಡಬೇಕಿದ್ದು, ಇದಕ್ಕೆ ಗ್ರಾಮಸ್ಥರು ಹಾಗೂ ಊರಿನ ವಿದ್ಯಾವಂತ ಯುವಕರು ಕೈಜೋಡಿಸಬೇಕು” ಎಂದು ಮನವಿ ಮಾಡಿದರು. “ಊರಿನ ಮನೆ ಮಗನಾಗಿ ನನ್ನ ಉಸಿರಿರುವವರೆಗೂ ಜನಸೇವೆಗಾಗಿ ಶ್ರಮಿಸುತ್ತೇನೆ” ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದ ವಿವರ: ಕಾರ್ಯಕ್ರಮವು ಅಜಯಶಾಸ್ತ್ರಿ ಹಾಗೂ ಪ್ರವೀಣ್ ಅವರ ವೇದಘೋಷದೊಂದಿಗೆ ಆರಂಭವಾಯಿತು. ಚಂದ್ರಕಲಾ ಪ್ರಾರ್ಥಿಸಿದರು, ಮೂರ್ತಿರಾವ್ ಸ್ವಾಗತಿಸಿದರು. ಕೆ.ಎಲ್. ಗಂಗಾಧರ್ ಕಾರ್ಯಕ್ರಮ ನಿರೂಪಿಸಿ, ಭೋಜರಾಜ ಶೆಟ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಶೆಟ್ರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಪೂರ್ಣಿಮಾ ಮೂರ್ತಿರಾವ್, ಹಿರಿಯರಾದ ಸದಾನಂದ ಶೆಟ್ರು, ಮಂಜುನಾಥ್ ಶೆಟ್ರು, ರಾಜಶೇಖರ್ ಗೌಡ್ರು, ಕೃಷ್ಣಮೂರ್ತಿ, ದಾಮೋದರ, ರಾಘವೇಂದ್ರ, ಗಂಗಾಧರ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಳಿಗ್ಗೆ ದೇವರಿಗೆ ರುದ್ರಾಭಿಷೇಕ ಜರುಗಿತು ಹಾಗೂ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಬರಹ: ತಂಡ, vishwachetana.com

Leave a Comment