ಹೊಸನಗರ | ಫೆಬ್ರವರಿ 22: ಬ್ರಿಟಿಷರ ಕಾಲದಲ್ಲಿ ಬಂಗಾಳವನ್ನು ಒಡೆಯುವ ಮೂಲಕ ಭಾರತವನ್ನು ವಿಭಜಿಸಲು ಸಂಚು ರೂಪಿಸಿದ ಶಕ್ತಿಗಳಿಗೆ ಬಂಕಿಮ ಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ಗೀತೆ ಅತಿದೊಡ್ಡ ಪ್ರತ್ಯುತ್ತರವಾಗಿ ಹೊರಹೊಮ್ಮಿತು ಎಂದು ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ನ. ನಾಗರಾಜ ಹೇಳಿದರು..
ಇಲ್ಲಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ, ರಾಷ್ಟ್ರೋತ್ಥಾನ ಬಳಗ ಹಾಗೂ ಗ್ರಾಮಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಸಂಸ್ಕೃತಿ ಉತ್ಸವದಲ್ಲಿ ಅವರು ಮಾತನಾಡಿದರು.

ಪುಸ್ತಕದ ಅವಲೋಕನ ಮತ್ತು ಸಂದೇಶ
ಶಿವರಾಮು ಅವರು ರಚಿಸಿದ ‘ಒಂದು ಕಥೆ ಒಂದು ವ್ಯಥೆ’ ಪುಸ್ತಕದ ಅವಲೋಕನ ನಡೆಸಿದ ನ. ನಾಗರಾಜ ಅವರು, “ವಂದೇ ಮಾತರಂ ಕೇವಲ ಗೀತೆಯಲ್ಲ, ಅದು ನಮ್ಮ ರಾಷ್ಟ್ರ ಜೀವನದ ಏರಿಳಿತಗಳ ಪ್ರತಿಬಿಂಬ. ಅದರ ಗೆಲುವು ರಾಷ್ಟ್ರದ ಗೆಲುವು, ಅದರ ವಿಭಜನೆ ರಾಷ್ಟ್ರದ ವಿಭಜನೆಯೇ ಸರಿ. ಈ ಗೀತೆಯ ಇತಿಹಾಸ ಮತ್ತು ಭಾವವನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಲು ಈ ಪುಸ್ತಕವನ್ನು ಓದಬೇಕು” ಎಂದು ಕರೆ ನೀಡಿದರು.


ರಾಷ್ಟ್ರೀಯತೆಯ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ:
“ವಂದೇ ಮಾತರಂ ಗೀತೆಗೆ 150 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ಗೀತೆಯನ್ನು ಕಡ್ಡಾಯಗೊಳಿಸಿರುವುದು ಹೆಮ್ಮೆಯ ವಿಷಯ. ಈ ಮೂಲಕ ಸ್ವತ್ವದ ಸಂದೇಶವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗುತ್ತಿದೆ.”
ಲೇಖಕ ತಿರುಪತಿ ನಾಯಕ್ ಅವರು ರಾಷ್ಟ್ರೋತ್ಥಾನ ಬಳಗದ ನಿಸ್ವಾರ್ಥ ಸೇವೆ ಮತ್ತು ಹನಿಯ ರವಿ ಅವರ ಪ್ರಾಮಾಣಿಕ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಸಾಂಸ್ಕೃತಿಕ ಮೆರುಗು ಸನ್ಮಾನ: ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಹೆಬ್ಬಾರ್ ಮತ್ತು ನಿವೃತ್ತ ಶಿಕ್ಷಕ, ಲೇಖಕ ತಿರುಪತಿ ನಾಯಕ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಗಾಯನ: ನೂರಾರು ಕಂಠಗಳಿಂದ ಮೊಳಗಿದ ಸಾಮೂಹಿಕ ‘ವಂದೇ ಮಾತರಂ’ ಗಾಯನ ಭಕ್ತಿಭಾವ ಮೂಡಿಸಿತು.
ನೃತ್ಯ: ವಿದುಷಿ ಶ್ರೀಮತಿ ಆರತಿ ಮಹೇಶ್ ಅವರ ಮಾರ್ಗದರ್ಶನದಲ್ಲಿ ಕಲಾ ಭಾರತಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕೆ.ಎಸ್. ವಿನಾಯಕ ಅವರ ವಂದೇ ಮಾತರಂ ಕುರಿತ ನೃತ್ಯ ರೂಪಕ ವಿಶೇಷ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳೀನ್ ಚಂದ್ರ ಕೆ.ಎಸ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘವೇಂದ್ರ ಉಪಸ್ಥಿತರಿದ್ದರು. ಶೃತಿ ಶರತ್ ನಿರೂಪಿಸಿದರು, ವಿನಾಯಕ ಪ್ರಭು ಸ್ವಾಗತಿಸಿ, ಕು. ಧನ್ಯಶ್ರೀ ವಂದಿಸಿದರು.
ಬರಹ: ತಂಡ, vishwachetana.com







