​ಹೊಸನಗರ: ರಾಮಚಂದ್ರಾಪುರ ಮಠದ ‘ರಾಮಸಾನ್ನಿಧ್ಯ’ಕ್ಕೆ ಭವ್ಯ ಶಿಲಾನ್ಯಾಸ; ಶಿಷ್ಯರೇ ಮಠದ ನಿಜವಾದ ಆಸ್ತಿ – ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Photo of author

By vishwachetana807@gmail.com

​”ಮಠದಲ್ಲಿ ಹಣದ ಕೊಪ್ಪರಿಗೆಯಿಲ್ಲ, ಶಿಷ್ಯರ ಭಕ್ತಿಯೇ ನಮ್ಮ ಶ್ರೀರಕ್ಷೆ”:

ಹೊಸನಗರ: “ರಾಮಚಂದ್ರಾಪುರ ಮಠದ ಕುರಿತು ಹೊರಜಗತ್ತಿನಲ್ಲಿ ಬೇರೆಯೇ ಕಲ್ಪನೆ ಇದೆ. ಮಠದಲ್ಲಿ ಹಣದ ಕೊಪ್ಪರಿಗೆ ಇದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ನಿಜವಾಗಿ ನಮ್ಮಲ್ಲಿರುವುದು ಶಿಷ್ಯರೆಂಬ ಸಂಪತ್ತು. ಶೂನ್ಯದಿಂದಲೇ ನಮ್ಮೆಲ್ಲಾ ಯೋಜನೆಗಳು ಆರಂಭಗೊಳ್ಳುತ್ತವೆ,” ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಶರಾವತಿ ನದಿ ತೀರದ ಹೊಸನಗರ ಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರಧಾನಮಠ ಪುನರ್ ನಿರ್ಮಾಣ’ ಸಮಿತಿಯ ವತಿಯಿಂದ ‘ರಾಮಸಾನ್ನಿಧ್ಯ’ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಭಾವನಾತ್ಮಕ ಸಂಬಂಧವೇ ಶಕ್ತಿ “ಗುರುವಿನ ಆದೇಶವನ್ನು ಶಿರಸಾವಹಿಸಿ ಪಾಲಿಸುವ ಶಿಷ್ಯರು ನಮ್ಮೊಂದಿಗಿದ್ದಾರೆ. ಸಂಕಷ್ಟವಿರಲಿ ಅಥವಾ ಸಂಭ್ರಮವಿರಲಿ, ಮಠದೊಂದಿಗೆ ಭಕ್ತರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಹಾಗಾಗಿಯೇ ‘ನಮ್ಮ ಮಠ’ ಎಂಬ ಪ್ರೀತಿಯಿಂದ ಅವರು ಯಾವುದೇ ಯೋಜನೆಯನ್ನು ಯಶಸ್ವಿಗೊಳಿಸುತ್ತಾರೆ,” ಎಂದು ಶ್ರೀಗಳು ಶ್ಲಾಘಿಸಿದರು. ಶರಾವತಿ ನದಿ ಉಗಮದ ಪುಣ್ಯ ನೆಲದಲ್ಲಿ ನಡೆಯುತ್ತಿರುವ ಈ ಶಿಲಾನ್ಯಾಸವು ಸಹಸ್ರಮಾನದ ಇತಿಹಾಸಕ್ಕೆ ನಾಂದಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗಣ್ಯರ ಉಪಸ್ಥಿತಿ ಮತ್ತು ಶ್ಲಾಘನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ರಾಮಚಂದ್ರಾಪುರ ಮಠ ಮತ್ತು ಇಲ್ಲಿನ ಗುರುಗಳು ನಮ್ಮ ಜೀವನದಲ್ಲಿ ಪವಾಡಗಳನ್ನು ಕಣ್ಣಾರೆ ಕಾಣುವಂತೆ ಮಾಡಿದ್ದಾರೆ,” ಎಂದರು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಗೋಸಂರಕ್ಷಣೆಯಲ್ಲಿ ಹೆಸರು ಮಾಡಿರುವ ಈ ಮಠದ ಅಭಿವೃದ್ಧಿಗೆ ನಾವು ಸದಾ ಬದ್ಧ,” ಎಂದು ಭರವಸೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹಾಗೂ ಶಿಮುಲ್ ಅಧ್ಯಕ್ಷ ವಿದ್ಯಾಧರ ಮಠದ ಕಾರ್ಯವೈಖರಿಯನ್ನು ಶ್ಲಾಘಿಸಿ ಮಾತನಾಡಿದರು

ಧಾರ್ಮಿಕ ವಿಧಿವಿಧಾನಗಳ ವೈಭವ
ಶಿಲಾನ್ಯಾಸಕ್ಕೂ ಮುನ್ನ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು:
ಶಿಲೆಯ ಮೆರವಣಿಗೆ: ಬೆಳಿಗ್ಗೆ ೯ ಗಂಟೆಗೆ ಶಿಲಾನ್ಯಾಸದ ಶಿಲೆಯನ್ನು ಭವ್ಯವಾಗಿ ಮೆರವಣಿಗೆ ಮಾಡಲಾಯಿತು.
ಪಾರಾಯಣ: ಶ್ರೀಗುರುಪಾದುಕಾ ಸ್ತೋತ್ರ ಸಮರ್ಪಣೆ, ಶ್ರೀರಾಮತಾರಕ ಜಪ ಮತ್ತು ಶಾರದಾಷ್ಟಕ ಪಠಣ ನಡೆಯಿತು.
ಅಭಿಷೇಕ: ಸಹಸ್ರಾಧಿಕ ಕುಂಕುಮಾರ್ಚನೆ ಹಾಗೂ ಶತಾಧಿಕ ರುದ್ರಪಠಣಪೂರ್ವಕವಾಗಿ ವಿಶೇಷ ಅಭಿಷೇಕ ನೆರವೇರಿತು.
ಮುಷ್ಟಿ ದ್ರವ್ಯ: ಭಕ್ತರು ಭಕ್ತಿಯಿಂದ ಸಮರ್ಪಿಸಿದ ‘ಮುಷ್ಟಿ ದ್ರವ್ಯ’ ಸಮರ್ಪಣೆ ಕಾರ್ಯಕ್ರಮದ ವಿಶೇಷವಾಗಿತ್ತು.

ವೇದಿಕೆಯಲ್ಲಿ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್‌ರಾವ್ ಕಾರಣಗಿರಿ, ಕಾರ್ಯಾಧ್ಯಕ್ಷ ಗಣಪತಿ ಭಟ್ ಜಟ್ಟಿಮನೆ, ಶಾಸನ ತಂತ್ರದ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ, ಮಹೇಶ್ ಕಜೆ, ರಮೇಶ್ ಹೆಗಡೆ ಗುಂಡೂಮನೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಬರಹ: ತಂಡ, vishwachetana.com

Leave a Comment