
ಸಾಗರ:ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಕೆಲವು ಮುಖಂಡರ ನಡೆ “ಥರ್ಡ್ ಕ್ಲಾಸ್ ರಾಜಕಾರಣ” ಎಂದು ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕರ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದರು.

ಜಾತ್ರೆಯಲ್ಲಿ ಶಾಸಕರ ಹಸ್ತಕ್ಷೇಪವಿಲ್ಲ, ಅದು ಅವರ ಜವಾಬ್ದಾರಿ
ಸಾಗರ ಮಾರಿಕಾಂಬೆ ಜಾತ್ರೆಯಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ಯಾವುದೇ ಶಾಸಕರು ಮಾರಿಕಾಂಬೆ ದೇವಸ್ಥಾನದ ಗೌರವಾಧ್ಯಕ್ಷರಾಗಿರುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರು, ರಸ್ತೆ ಸೌಕರ್ಯ, ಪಾರ್ಕಿಂಗ್ ಮತ್ತು ಭದ್ರತೆಯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಶಾಸಕರ ಕರ್ತವ್ಯವೇ ಹೊರತು ಹಸ್ತಕ್ಷೇಪವಲ್ಲ” ಎಂದು ಸ್ಪಷ್ಟಪಡಿಸಿದರು.


ಪ್ರಚಾರಕ್ಕಾಗಿ ಟೀಕೆ ಮಾಡುವುದನ್ನು ನಿಲ್ಲಿಸಿ
“ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಕೇವಲ ಶಾಸಕರಿಗೆ ಬೈದರೆ ದೊಡ್ಡ ನಾಯಕರಾಗುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ವಾರಕ್ಕೊಮ್ಮೆ ಪ್ರೆಸ್‌ಮೀಟ್ ಮಾಡಿ ಅಜ್ಞಾನ ಪ್ರದರ್ಶಿಸುವುದಕ್ಕಿಂತ, ಜನರ ನಡುವೆ ಹೋಗಿ ಕೆಲಸ ಮಾಡಿ” ಎಂದು ರತ್ನಾಕರ್ ಹೊನಗೋಡು ಅವರ ಹೆಸರು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅನಂತಪುರ ಜಾತ್ರೆಗೆ ಎಲ್ಲರ ಸಹಕಾರ ಅಗತ್ಯ
ಸಾಗರ ಹೊರತುಪಡಿಸಿದರೆ ಅನಂತಪುರ ಮಾರಿಕಾಂಬೆ ಜಾತ್ರೆಯು ತಾಲೂಕಿನ ದೊಡ್ಡ ಹಬ್ಬವಾಗಿದೆ. ಇಲ್ಲಿ ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಜಾತ್ರೆಯನ್ನು ನಡೆಸಬೇಕು. ಶಾಸಕರು ಈಗಾಗಲೇ ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ
ಹಿಂದೆ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರ ಮತ್ತು ಅರಣ್ಯ ಇಲಾಖೆಯ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಸೋಮಶೇಖರ್, “ಶಾಸಕರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಇತಿಹಾಸವನ್ನು ಒಮ್ಮೆ ನೋಡಿಕೊಳ್ಳಿ. ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬರಹ: ತಂಡ, vishwachetana.com









