“ಮಕ್ಕಳಿಗೆ ಉತ್ತಮ ಸಂಸ್ಕಾರವೇ ನಿಜವಾದ ಆಸ್ತಿ: ಶ್ರೀಗಳ ಬೋಧನೆ”

Photo of author

By vishwachetana807@gmail.com

​”ಜೀವನಕ್ಕೆ ದಾರಿದೀಪವಾಗಲಿ ಹಿರಿಯರ ಮೇಲಿನ ಭಕ್ತಿ: ರಿಪ್ಪನ್‌ಪೇಟೆಯಲ್ಲಿ ಶ್ರೀ ಮುರುಘರಾಜೇಂದ್ರ ಶ್ರೀಗಳ ಆಶೀರ್ವಚನ”

ರಿಪ್ಪನ್ ಪೇಟೆ: ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆತರೆ ಅದೇ ನಿಜವಾದ ಶಿಕ್ಷಣ , ತಂದೆ-ತಾಯಿ ಗುರು-ಹಿರಿಯರ ಮೇಲೆ ತೋರುವ ಭಕ್ತಿ ಶ್ರದ್ದೆಯೇ ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿದೆ ಎಂದು ಬೆಕ್ಕಿನಕಲ್ಮಠದ ಡಾ.ಶ್ರೀ ಶ್ರೀ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳಿದರು.

ಪಟ್ಟಣದ ಪ್ರತಿಷ್ಠಿತ ಶಾಲೆಯಾದ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸನಾತನ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ತಂದೆ – ತಾಯಿಯನ್ನೂ ದೇವರೆಂದು ನಾವು ಪೂಜಿಸುತ್ತೆವೆ ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಅತಿಯಾದ ಪಾಶ್ಚಾತ್ಯ ಚಿಂತನೆ, ಶಿಕ್ಷಣ, ಮೋಬೈಲ್ ನಂತಹ ಆಕರ್ಷಕತೆಯಿಂದ ಮೌಲ್ಯ ಶಿಕ್ಷಣ ನಶಿಸಿ ಹೋಗುತ್ತಿದೆ. ನೈಜ ಶಿಕ್ಷಣದ ಪುನರುತ್ಥಾನವಾಗಬೇಕೆಂದರೆ ಮಕ್ಕಳಿಗೆ ತಂದೆ ತಾಯಿಗೆ ನಾವು ಸಮರ್ಪಿತರು ಎಂಬ ಭಾವ ಬರಬೇಕು. ಹಿಂದೆ ತಂದೆ ತಾಯಿಯರಿಗೆ ಪಾದಪೂಜೆ ಮಾಡುವಂತಹ ಪದ್ಧತಿಯಿತ್ತು ಅದರಿಂದ ಆ ಭಾವ ಮತ್ತು ಶ್ರದ್ಧೆ ಉಳಿದಿತ್ತು , ಇಂದು ಅದೇ ಪರಂಪರೆ ನಮ್ಮ ಶಾಲೆಯಿಂದಲೂ ಮುಂದುವರೆಯುತ್ತಿದೆ ಎಂದರು.

ಅನಂತಮೂರ್ತಿ ಜವಳಿಯವರ ಮೇಲೆ ತಮ್ಮ ಮಕ್ಕಳು ಅವರ ಮೇಲಿಟ್ಟಿರುವ ಪ್ರೀತಿ,ಶ್ರದ್ಧೆಯನ್ನು ಉಲ್ಲೇಖಿಸಿದ ಸ್ವಾಮೀಜಿವರು ಈ ಪೀಳಿಗೆಯ ಮಕ್ಕಳಿಗೆ ಇದು ಪ್ರೇರಣೆ ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.

ಗುರುಗಳಿಂದ ಸನ್ಮಾನಿತರಾಗಿ ಮಾತನಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ಜವಳಿಯವರು ಪರಿಸರ , ಸಸ್ಯ ಸಂರಕ್ಷಣೆಯಲ್ಲಿ ನಾವೇನೋ ಸಾಧಿಸಿದ್ದೆನೆ ಎಂದು ಸರಕಾರಗಳು ಪ್ರಶಸ್ತಿ ನೀಡಿದೆ ಆದರೆ ಈ ಪ್ರಶಸ್ತಿಗಳು ನಮಗೆ ಇನ್ನಷ್ಟು ಕೆಲಸ ಮಾಡಲು ಮತ್ತು ನಿಜವಾಗಿಯೂ ಕೆಲಸ ಮಾಡುವವರಿಗೆ ಮತ್ತಷ್ಟು ಸಹಕಾರ ,ಬೆಂಬಲ ನೀಡಲಿದೆ ಎಂದರು.

ನನ್ನ ಮಕ್ಕಳು ಉನ್ನತ ಶಿಕ್ಷಣ ಪೂರೈಸಿ ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದರು, ನಮಗೆ ವಯಸ್ಸಾದಂತೆ ಅವರು ಕೈ ತುಂಬಾ ಸಂಬಳದ ಕೆಲಸಗಳನ್ನು ಇಂದು ಬಿಟ್ಟು ನಮ್ಮೊಂದಿಗೆ ಇರುವುದು, ನಮ್ಮನ್ನು ನೋಡಿಕೊಳ್ಳುತ್ತಿರುವುದು ನಮಗೆ ಸಂತೋಷ ತಂದಿದೆ. ಇಂದಿನ ಕಾಲದಲ್ಲಿ ವೃದ್ದಾಶ್ರಮಗಳಿಗೆ ಪೋಷಕರನ್ನು ಕಳಿಸುತ್ತಿರುವುದನ್ನು ನೋಡಿದಾಗ ಉತ್ತಮ ಸಂಸ್ಕಾರ, ಜೀವನ ಮೌಲ್ಯ ಕಲಿಸುವಂತಹ ಶಿಕ್ಷಣ ಎಷ್ಟು ಅಗತ್ಯ ಎಂಬುವುದುನ್ನು ನಾವು ಅರಿಯಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್.ಜೆ‌.ಜಿ ವಿದ್ಯಾಪೀಠದ ನಿರ್ದೇಶಕರಾದ ಚಂದ್ರಪ್ಪ ಮಾತನಾಡಿ ಶೈಕ್ಷಣಿಕ ವಿಷಯದಲ್ಲಿ ನಮ್ಮ ಸಂಸ್ಥೆ ಸಾಧನೆಗಳ ಮೆಟ್ಟಿಲೆರಲು ಪ್ರಮುಖ ಕಾರಣವೇ ಮೌಲ್ಯ ಶಿಕ್ಷಣಕ್ಕೆ ನಾವು ಕೊಟ್ಟಂತಹ ಆದ್ಯತೆ ಎಂದು ಹೇಳಿ ಈ ಬಾರಿಯ SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪೋಷಕರು ಶಾಲೆಯ ಕುರಿತಂತೆ ,ವಿದ್ಯಾರ್ಥಿ ಜೀವನದ ಮೆಲುಕು ಹಾಕಿ ಅವರವರ ಅಭಿಪ್ರಾಯಗಳನ್ನು ಹಂಚಿಕೊಂಡರು.

8-9 ತರಗತಿ ವಿದ್ಯಾರ್ಥಿಗಳಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೋಟ್ಟು ಶುಭ ಹಾರೈಸಿದರು.

ಈಶ್ವರ್ ಮಳಕೊಪ್ಪ ಅಧ್ಯಕ್ಷತೆ ವಹಿಸಿದ್ದರು,ನಿರ್ದೇಶಕರಾದ ದಾನೇಶ್ ಎಲ್.ವೈ ಕಾರ್ಯಕ್ರಮ ಉಧ್ಘಾಟಿಸಿದರು.

ನಿರ್ದೇಶಕ ಚಂದ್ರಪ್ಪ, ಚಂದ್ರಶೇಖರಯ್ಯ ,ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಕಾಮ್ಳೆ,ಹುಗುಡಿ ವರ್ತೆಶ್, ಮುಖ್ಯ ಶಿಕ್ಷಕ ಚಂದ್ರಪ್ಪ ಕೆ.ಎನ್ ,ಗುರುಪ್ರಸಾದ್ ,ಮಂಜುನಾಥ್ ಸೇರಿದಂತೆ ಶಿಕ್ಷಕ ವೃಂದ ಮತ್ತು ಪೋಷಕ ವೃಂದ ಉಪಸ್ಥಿತರಿದ್ದರು.

ಕು|ಬಿ.ಬಿ ಸುಮಯ್ಯ ಸ್ವಾಗತಿಸಿ,ಕು|ಮೇಘನ ವಂದಿಸಿದರು.

ಬರಹ: ತಂಡ, vishwachetana.com

Leave a Comment