
ಹೊಸನಗರ: ಪಟ್ಟಣದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial Gas Cylinders) ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಹೊಸನಗರದ ವರ್ತಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಅವರಿಗೆ ಅಧಿಕೃತ ಮನವಿ ಸಲ್ಲಿಸಿ, ನಿರಂತರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಯುಗಾದಿ ಮತ್ತು ರಂಜಾನ್ ಹಬ್ಬದ ಆತಂಕ:
ಸದ್ಯದಲ್ಲೇ ಯುಗಾದಿ ಮತ್ತು ರಂಜಾನ್ ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಹೋಟೆಲ್ ಮತ್ತು ವ್ಯಾಪಾರ ವಹಿವಾಟುಗಳು ಹೆಚ್ಚಾಗಿರುತ್ತವೆ. ಆದರೆ ಈಗಲೇ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆ ಸಮರ್ಪಕವಾಗಿಲ್ಲದಿರುವುದು ಹೋಟೆಲ್ ಉದ್ಯಮಿಗಳಲ್ಲಿ ಭಯ ಮತ್ತು ಭೀತಿ ಮೂಡಿಸಿದೆ. ಪ್ರಧಾನಿಗಳು ದೇಶದಲ್ಲಿ ಅನಿಲ ಕೊರತೆ ಇಲ್ಲ ಎಂದು ಘೋಷಿಸಿದ್ದರೂ, ಹೊಸನಗರದಲ್ಲಿ ಮಾತ್ರ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ಮನವಿಯಲ್ಲಿ ವಿವರಿಸಲಾಗಿದೆ.


ಏಜೆನ್ಸಿಗಳ ಮೇಲೆ ನಿಗಾ ಇಡಲು ಆಗ್ರಹ:
ಗ್ಯಾಸ್ ಏಜೆನ್ಸಿಗಳ ಮಾಲೀಕರನ್ನು ಕರೆಸಿ ಸಭೆ ನಡೆಸಬೇಕು ಹಾಗೂ ಪೂರೈಕೆಯ ಮೇಲೆ ಮೇಲ್ವಿಚಾರಣೆ ನಡೆಸಬೇಕು. ಹೋಟೆಲ್ ಉದ್ಯಮವು ಸಾರ್ವಜನಿಕರಿಗೆ ಸೇವೆ ನೀಡುವ ಪ್ರಮುಖ ಕ್ಷೇತ್ರವಾಗಿದ್ದು, ಇಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ತಹಶೀಲ್ದಾರ್ ಅವರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ವರ್ತಕರ ಸಂಘದ ಅಧ್ಯಕ್ಷರಾದ ಪೂರ್ಣೇಶ್ ಮಲೆಬೈಲ್ ಮತ್ತು ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೊಸನಗರದ ತಹಶೀಲ್ದಾರ್ ಭರತ್ ರಾಜ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ಹಾಗೂ ಪಟ್ಟಣ ಪಂಚಾಯತಿ ಚೀಫ್ ಆಫೀಸರ್ ಎಂ.ಎನ್. ಹರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ವರ್ತಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ಸದಸ್ಯರು ಮತ್ತು ಪಟ್ಟಣದ ಪ್ರಮುಖ ವ್ಯಾಪಾರಿಗಳು ಉಪಸ್ಥಿತರಿದ್ದರು.
ಬರಹ: ತಂಡ, vishwachetana.com









