ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಶ್ರೀ ರೇಣುಕಾನಂದ ಸ್ವಾಮೀಜಿ

Photo of author

By vishwachetana807@gmail.com

ಸಮಾಜದ ಸಂಘಟನೆ ಮತ್ತು ಶಿಕ್ಷಣಕ್ಕೆ ನನ್ನ ಸಂಪೂರ್ಣ ಬೆಂಬಲ: ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ: “ಪೋಷಕರು ಮಕ್ಕಳಿಗೆ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿ ಇಡುವುದಕ್ಕಿಂತ, ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮೂಲಕ ಅವರನ್ನೇ ಸಮಾಜದ ಅಮೂಲ್ಯ ಆಸ್ತಿಯನ್ನಾಗಿ ರೂಪಿಸಬೇಕು. ಜ್ಞಾನವಂತ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ,” ಎಂದು ಶಿವಮೊಗ್ಗ ಜಿಲ್ಲೆಯ ಗರ್ತಿಕೆರೆ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರೇಣುಕಾನಂದ ಮಹಾ ಸ್ವಾಮೀಜಿಯವರು ಮಾರ್ಮಿಕವಾಗಿ ನುಡಿದರು.
ಪಟ್ಟಣದ ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪಟ್ಟಣದ ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶಿಕ್ಷಣವೇ ಶಕ್ತಿ: ಶ್ರೀಗಳ ಆಶೀರ್ವಚನ
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಸ್ಮರಿಸಿದ ಶ್ರೀಗಳು, “ನಮ್ಮ ಸಮಾಜದಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು. ಶಿಕ್ಷಣವೊಂದೇ ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನತ್ತ ಕೊಂಡೊಯ್ಯಬಲ್ಲ ಮಹಾನ್ ಶಕ್ತಿ. ಈಡಿಗ ಸಮಾಜದ ಪ್ರತಿ ಮಗುವೂ ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆಯಬೇಕು. ಸಮಾಜದ ನೌಕರರು ಸಂಘಟಿತರಾಗಿ ಇಂತಹ ವೇದಿಕೆ ನಿರ್ಮಿಸಿರುವುದು ಸಂತಸದ ವಿಷಯ. ಈ ಸಂಘಟನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿ ಆಸರೆಯಾಗಬೇಕು. ಮನುಷ್ಯ ಜನ್ಮ ಸಾರ್ಥಕವಾಗುವುದು ನಮ್ಮಲ್ಲಿ ಹಂಚಿ ತಿನ್ನುವ ಗುಣ ಮತ್ತು ಸಮಾಜದ ಬಗ್ಗೆ ಕಳಕಳಿ ಇದ್ದಾಗ ಮಾತ್ರ,” ಎಂದು ತಿಳಿಸಿದರು.

ಸಮಾಜದ ಏಳಿಗೆಗೆ ನನ್ನ ಸಂಪೂರ್ಣ ಬೆಂಬಲ: ಶಾಸಕ ಬೇಳೂರು ಗೋಪಾಲಕೃಷ್ಣ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀ ಬೇಳೂರು ಗೋಪಾಲಕೃಷ್ಣ ಅವರು, ಸಮಾಜದ ಶೈಕ್ಷಣಿಕ ಪ್ರಗತಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು.

“ಯಾವುದೇ ಸಮಾಜವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿಯಬೇಕಾದರೆ ಒಗ್ಗಟ್ಟು ಅತ್ಯಗತ್ಯ. ಕ್ಷೇತ್ರದಲ್ಲಿ ಸಮಾಜದ ಭವನಗಳ ನಿರ್ಮಾಣಕ್ಕೆ ಅಥವಾ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಸೌಲಭ್ಯ ಹಾಗೂ ಅಗತ್ಯ ಅನುದಾನ ನೀಡಲು ನಾನು ಸದಾ ಬದ್ಧನಿದ್ದೇನೆ. ನಮ್ಮ ಮಕ್ಕಳು ಕೇವಲ ಪದವಿಗಷ್ಟೇ ಸೀಮಿತವಾಗದೆ IAS, KPS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಅಧಿಕಾರಗಳ ಚುಕ್ಕಾಣಿ ಹಿಡಿಯಬೇಕು,” ಎಂದು ಅವರು ಕರೆ ನೀಡಿದರು.

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನದ ಸಂಭ್ರಮ:
ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಅಲ್ಲದೆ, ಸಮಾಜಕ್ಕೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಗಣ್ಯರ ಉಪಸ್ಥಿತಿ:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯ ಈಡಿಗ ನೌಕರರ ಕ್ರಿಯಾವೇದಿಕೆಯ ಅಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಕೆ.ಜಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೊಸನಗರ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಶ್ರೀ ಬಿ.ಪಿ. ರಾಮಚಂದ್ರ ಬಂಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ., ಹಾಗೂ ತಾಲೂಕು ಪಂಚಾಯತ್ ಪಿ.ಎಂ.  ಪೋಷಣ  ಸಹಾಯಕ ನಿರ್ದೇಶಕರಾದ ಶ್ರೀ ಶೇಷಾಚಲ ಜಿ. ನಾಯ್ಕ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಬರಹ: ತಂಡ, vishwachetana.com

Leave a Comment