​ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಭಾಷಣ: ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೂರು

Photo of author

By vishwachetana807@gmail.com

ರಿಪ್ಪನ್‌ಪೇಟೆ: ಅಸ್ಸಾಂ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ್ದಾರೆನ್ನಲಾದ ಪ್ರಚೋದನಾಕಾರಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕೆರೆಹಳ್ಳಿ ಹೋಬಳಿ ಮಹಾಶಕ್ತಿ ಕೇಂದ್ರದ ವತಿಯಿಂದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಅಸ್ಸಾಂನಲ್ಲಿ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿ ಕುರಾನ್‌ನಲ್ಲಿ ನಮಾಜ್ ಮಾಡುವಾಗ ವಿಷ ಸರ್ಪ ಕಂಡರೆ ಅದನ್ನು ಕೊಲ್ಲಬೇಕು ಎಂದು ಬರೆಯಲಾಗಿದೆ ಎಂದು ಉಲ್ಲೇಖಿಸಿರುವ ಖರ್ಗೆಯವರು, ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿಷ ಸರ್ಪಗಳಿಗೆ ಹೋಲಿಸಿ ಮುಸಲ್ಮಾನರು ಇವುಗಳನ್ನು ಕೊಲ್ಲಬೇಕು ಎಂದು ಹೇಳಿಕೆ ನೀಡುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಲಾಗಿದೆ.

​ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹೊಸನಗರ ಮಂಡಲ ಅಧ್ಯಕ್ಷರಾದ ಎನ್. ಸತೀಶ್ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆಯವರು ಸಮಾಜದಲ್ಲಿ ದ್ವೇಷ ಬಿತ್ತುವ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಎತ್ತಿಕಟ್ಟಿ ಜೀವಕ್ಕೆ ಸಂಚಕಾರ ತರುವ ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಪ್ರಚೋದನಾಕಾರಿ ಭಾಷಣವು ದೇಶದ ಶಾಂತಿಗೆ ಧಕ್ಕೆ ತರುವಂತದ್ದಾಗಿದ್ದು, ಅವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

​ದೂರು ನೀಡುವ ಈ ಸಂದರ್ಭದಲ್ಲಿ ನಾಗಾರ್ಜುನ ಸ್ವಾಮಿ, ಕೆರೆಹಳ್ಳಿ ಹೋಬಳಿ ಯುವ ಮೋರ್ಚಾ ಅಧ್ಯಕ್ಷ ರಾಜೇಂದ್ರಗಂಟೆ, ಪ್ರದೀಪ್, ಪರಮೇಶ್ ಗುಳುಗುಳಿ ಶಂಕರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಂದರೇಶ್, ಮುಖಂಡರಾದ ಮಲ್ಲಿಕಾರ್ಜುನ (ಕಿಟ್ಟಿ), ತಾಲೂಕು ಯುವ ಮೋರ್ಚಾ ಸದಸ್ಯರಾದ ಮುರುಳಿ, ರವಿಹೊನ್ನಾಳಿ, ಹರೀಶ್ ಹಾಗೂ ಯುವ ಮೋರ್ಚಾದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಖಂಡರು ಮಾತನಾಡಿ, ಇಂತಹ ವಿಷಾದನೀಯ ಹೇಳಿಕೆಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಪೊಲೀಸರು ಮನವಿಯನ್ನು ಸ್ವೀಕರಿಸಿ ಕಾನೂನು ಕ್ರಮದ ಭರವಸೆ ನೀಡಿದ್ದಾರೆ.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಜನಪ್ರತಿನಿಧಿಯ ಆದ್ಯ ಕರ್ತವ್ಯವಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಪ್ರಚೋದನಾಕಾರಿ ಹೇಳಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಕದಡದಂತೆ ಎಚ್ಚರವಹಿಸುವುದು ಇಂದಿನ ಅಗತ್ಯ. ಕಾನೂನು ಬಾಹಿರ ಮತ್ತು ಹಿಂಸೆಗೆ ಪ್ರಚೋದನೆ ನೀಡುವಂತಹ ನಡೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎದುರಿಸಲು ಕಾನೂನು ಮತ್ತು ಸಂವಿಧಾನಾತ್ಮಕ ಹಾದಿಯೇ ಶ್ರೇಷ್ಠವಾದುದು. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ನಮ್ಮ ಆಶಯ.

​- ಸಂಪಾದಕರು, ವಿಶ್ವಚೇತನ.ಕಾಂ

ಬರಹ: Chetandas Hosamane

Leave a Comment