
ಹೊಸನಗರ: ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಇಂದಿನ ತಲೆಮಾರಿಗೆ ಪಾರಂಪರಿಕ ರುಚಿಗಳ ಪರಿಚಯ ಮಾಡುವ ಸದುದ್ದೇಶದಿಂದ ಆಕರ್ಷಕ ಆಹಾರ ಮೇಳವನ್ನು ಆಯೋಜಿಸಿದ್ದರು. ಕಳೆದ ಏಳೆಂಟು ವರ್ಷಗಳಿಂದ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ಕಾಲೇಜಿನ ವಿದ್ಯಾರ್ಥಿಗಳು, ಇಂದು ಸಹ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸಹಯೋಗದೊಂದಿಗೆ ಅತ್ಯಂತ ಯಶಸ್ವಿಯಾಗಿ ಈ ಮೇಳವನ್ನು ನಡೆಸಿಕೊಟ್ಟರು.


ಆಹಾರ ತಯಾರಿಸುವುದು ಆಧುನಿಕ ಜಗತ್ತಿನ ಆಸಕ್ತಿಕರ ಹಾಗೂ ಆರೋಗ್ಯಕರ ಹವ್ಯಾಸಗಳಲ್ಲಿ ಒಂದಾಗಿದ್ದು, ಈ ಮೇಳವು ಪ್ರತಿಯೊಬ್ಬರ ರುಚಿ ಮತ್ತು ಅಭಿವೃದ್ಧಿಯ ಬಗ್ಗೆ ಹೊಸ ಅಭಿಪ್ರಾಯ ಮೂಡುವಂತೆ ಮಾಡಿತು. ಕಾಲೇಜಿನ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಶೇಷವಾದ ಕೊಡಚಾದ್ರಿ ಹೋಳಿಗೆ, ವಿವಿಧ ಸ್ವಾದದ ಚಿತ್ರಾನ್ನ ಹಾಗೂ ಪಲಾವ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.

ಇದರೊಂದಿಗೆ ಮಾವಿನಕಾಯಿ, ಬೀಟ್ರೂಟ್ ಮತ್ತು ಸೌತೆಕಾಯಿ ಮಸಾಲ ಮಜ್ಜಿಗೆಗಳು, ವಿವಿಧ ಬಗೆಯ ಹಣ್ಣಿನ ತಂಪು ಪಾನೀಯಗಳು ಹಾಗೂ ಐಸ್‌ಕ್ರೀಮ್‌ಗಳು ಎಲ್ಲರ ಗಮನ ಸೆಳೆದವು. ಚಾಟ್ಸ್ ಪ್ರಿಯರಿಗಾಗಿ ಗೋಲ್ಗುಪ್ಪ, ಪಾನಿಪುರಿ, ಮಸಾಲಾ ಪೂರಿ ಹಾಗೂ ಮಸಾಲ ಮಂಡಕ್ಕಿ ಸಿದ್ಧಪಡಿಸಲಾಗಿತ್ತು. ಸ್ಪೈಸಿ ಸೌತೆಕಾಯಿ, ಮಾವಿನಕಾಯಿ ಮತ್ತು ಅನಾನಸ್ ಚೂರುಗಳು ಮೇಳಕ್ಕೆ ಆಗಮಿಸಿದವರ ಬಾಯಿ ಚಪ್ಪರಿಸುವಂತೆ ಮಾಡಿದವು. ವಿದ್ಯಾರ್ಥಿಗಳ ಈ ಸಾಂಘಿಕ ಪ್ರಯತ್ನವು ಪಾರಂಪರಿಕ ಆಹಾರ ಪದ್ಧತಿಯ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಯಿತು.
ಆಧುನಿಕ ಜೀವನಕ್ಕೆ ಪಾರಂಪರಿಕ ಸ್ಪರ್ಶ
ಆಧುನಿಕ ಜೀವನಶೈಲಿಯಲ್ಲಿ ನಮ್ಮ ಆರೋಗ್ಯಕರ ಆಹಾರ ಪದ್ಧತಿಗಳು ಮರೆಯಾಗುತ್ತಿವೆ. ಇಂತಹ ಸಮಯದಲ್ಲಿ ಮಲೆನಾಡಿನ ಪಾರಂಪರಿಕ ರುಚಿಗಳನ್ನು ಮರುಪರಿಚಯಿಸಿದ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ. ಸಂಸ್ಕೃತಿ ಮತ್ತು ಆರೋಗ್ಯವನ್ನು ಜೊತೆಯಾಗಿ ಕೊಂಡೊಯ್ಯುವ ಇಂತಹ ಮೇಳಗಳು ಇಂದಿನ ಅಗತ್ಯವಾಗಿದೆ.- ಸಂಪಾದಕರು, ವಿಶ್ವಚೇತನ.ಕಾಂ
ಬರಹ: Chetandas Hosamane









