ಹೊಸನಗರ: ಸಂಸದ ಬಿ.ವೈ. ರಾಘವೇಂದ್ರ ಅನುದಾನದಲ್ಲಿ ಕಲ್ಲುಹಳ್ಳ ರುದ್ರಭೂಮಿ ಅಭಿವೃದ್ಧಿ; ಸಿಲಿಕಾನ್ ಛೇಂಬರ್ ಮರು ಸ್ಥಾಪನೆ

Photo of author

By vishwachetana807@gmail.com

ಹೊಸನಗರ: ಪಟ್ಟಣದ ಕಲ್ಲುಹಳ್ಳದ ಹಿಂದೂ ರುದ್ರಭೂಮಿಯಲ್ಲಿ ಮಳೆಗಾಲದಲ್ಲಿ ಶವ ಸಂಸ್ಕಾರಕ್ಕೆ ಆಗುತ್ತಿದ್ದ ದೊಡ್ಡ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದ ಅಡಿಯಲ್ಲಿ ಇಲ್ಲಿನ ಸಿಲಿಕಾನ್ ಛೇಂಬರ್ ಹಾಗೂ ಮೇಲ್ಛಾವಣಿಯ ಮರು ಸ್ಥಾಪನೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಕಲ್ಲುಹಳ್ಳದ ಈ ರುದ್ರಭೂಮಿಯಲ್ಲಿ ಮಳೆಗಾಲದ ಸಮಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದು ಸಾರ್ವಜನಿಕರಿಗೆ ದೊಡ್ಡ ಸವಾಲಾಗಿತ್ತು. ಈ ಹಿಂದೆ 2005ರಲ್ಲಿ ಎಂ.ಎನ್. ಸುಧಾಕರ್ ಅವರು ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಇಲ್ಲಿ ಸಿಲಿಕಾನ್ ಛೇಂಬರ್ ಅಳವಡಿಸಲಾಗಿತ್ತು. ಆದರೆ, ದಶಕಗಳ ಕಾಲದ ಬಳಕೆಯಿಂದಾಗಿ ಈ ಛೇಂಬರ್ ಹಾಗೂ ಮೇಲ್ಛಾವಣಿ ನಾದುರಸ್ತಿಗೊಂಡು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.

ಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡ ಪಟ್ಟಣ ಪಂಚಾಯತಿ ಬಿಜೆಪಿ ಘಟಕವು ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಸಂಸದರು ತಮ್ಮ ನಿಧಿಯಿಂದ 5 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರು. ನಿರ್ಮಿತಿ ಕೇಂದ್ರದ ಮೂಲಕ ಅತ್ಯಂತ ವೇಗವಾಗಿ ಕಾಮಗಾರಿ ನಡೆದಿದ್ದು, ಮಳೆಗಾಲ ಆರಂಭವಾಗುವ ಮೊದಲೇ ಸಿದ್ಧಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನೂತನ ವ್ಯವಸ್ಥೆಯಿಂದಾಗಿ ಅತ್ಯಂತ ಕಡಿಮೆ ಕಟ್ಟಿಗೆ ಬಳಸಿ, ಮಳೆ ನೀರಿನ ಅಡೆತಡೆಯಿಲ್ಲದೆ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಅನುಕೂಲವಾಗಿದೆ.

“2005ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಹಕಾರದಿಂದ ನಿರ್ಮಾಣವಾಗಿದ್ದ ಈ ವ್ಯವಸ್ಥೆ ಇತ್ತೀಚೆಗೆ ನಾದುರಸ್ತಿಯಲ್ಲಿತ್ತು. ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿ, ನಮ್ಮ ಮನವಿಗೆ ಗೌರವ ನೀಡಿ ಮಳೆಗಾಲಕ್ಕೂ ಮುನ್ನವೇ 5 ಲಕ್ಷ ರೂ. ಅನುದಾನ ನೀಡಿ ಈ ಕೆಲಸ ಮಾಡಿಕೊಟ್ಟ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಹೊಸನಗರದ ಜನತೆಯ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.”
— ಎಂ. ಎನ್. ಸುಧಾಕರ್, ಜಿಲ್ಲಾ ಅಧ್ಯಕ್ಷರು, ಬಿಜೆಪಿ ಒಬಿಸಿ ಮೋರ್ಚಾ ಹಾಗೂ ಮಾಜಿ ಅಧ್ಯಕ್ಷರು, ಹೊಸನಗರ ಪಟ್ಟಣ ಪಂಚಾಯತ್.

ಬರಹ: Chetandas Hosamane

Leave a Comment