SAGARA:ಅಣು ಸ್ಥಾವರ ನಿರ್ಮಾಣ ಮಲೆನಾಡಿನ ಬದುಕಿಗೆ ತೂಗುಗತ್ತಿ: ಇಂಧೂದರ ಗೌಡ ಬೇಸೂರು ಆತಂಕ

ಹೊಸನಗರ: ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾಪವನ್ನು ವಿರೋಧಿಸಿ ಮೇ 7ರಂದು ಬೆಳಿಗ್ಗೆ 10:30ಕ್ಕೆ ಸಾಗರದ ಶಿವಪ್ಪ ನಾಯಕ ವೃತ್ತದಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜನ ಹೋರಾಟ ವೇದಿಕೆ ಅಧ್ಯಕ್ಷ ಬಿ.ಎ. ಇಂಧೂದರ ಗೌಡ ಬೇಸೂರು ತಿಳಿಸಿದರು.

ಕಳೂರು ಸಹಕಾರ ಸಂಘದ ನೂತನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಭವಿಷ್ಯಕ್ಕೆ ಮಾರಕವಾಗುವ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಭಾಗದಲ್ಲಿ ಇದಕ್ಕೆ ಅವಕಾಶ ನೀಡಬಾರದು. ಅತ್ಯಂತ ಸೂಕ್ಷ್ಮ ಪರಿಸರ ವಲಯವಾಗಿರುವ ಈ ಪ್ರದೇಶದಲ್ಲಿ ಅಣು ಸ್ಥಾವರ ನಿರ್ಮಾಣವಾದರೆ, ಅದು ಸಾಗರ ಮತ್ತು ಹೊಸನಗರ ಭಾಗದ ಜನರ ಬದುಕಿಗೆ ಸದಾ ತೂಗುಗತ್ತಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಂದರ್ಭಿಕ ಚಿತ್ರ AI

ಪ್ರಸ್ತಾವಿತ ಅಣು ಸ್ಥಾವರದ ವಿರುದ್ಧದ ಹೋರಾಟವು ನಮ್ಮ ಅಳಿವು ಮತ್ತು ಉಳಿವಿನ ಪ್ರಶ್ನೆಯಾಗಿದೆ. ಇದು ಕೇವಲ ಬೇಸೂರು ಗ್ರಾಮಕ್ಕೆ ಮಾತ್ರ ಸೀಮಿತವಾದ ಹೋರಾಟವಲ್ಲ; ಸಾಗರ ಹಾಗೂ ಹೊಸನಗರ ಭಾಗದ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಪಾಲ್ಗೊಳ್ಳಬೇಕು. ಬೇಸೂರು ಗ್ರಾಮದಲ್ಲಿ 177 ಮನೆಗಳಿದ್ದು, ಸರ್ಕಾರ ಇವರಿಗೆ ದೊಡ್ಡ ಮಟ್ಟದ ಪರಿಹಾರ ನೀಡಿ ಬೇರೆಡೆಗೆ ಸ್ಥಳಾಂತರಿಸಬಹುದು. ಆದರೆ, ಈ ಸ್ಥಾವರದಿಂದಾಗಿ ಸುತ್ತಮುತ್ತಲಿನ ಜನರ ಬದುಕಿಗೆ ದೊಡ್ಡ ಗಂಡಾಂತರ ಎದುರಾಗಲಿದೆ. ಇದು ಇಡೀ ತಾಲೂಕಿನ ನೆಲ, ಜಲ ಮತ್ತು ಜೀವನದ ಸಮಸ್ಯೆಯಾಗಿದೆ ಎಂದರು.

ಸಾಂದರ್ಭಿಕ ಚಿತ್ರ AI

ಈಗಾಗಲೇ ಈ ಭಾಗದ ಜನರು ವಿವಿಧ ಜಲ ವಿದ್ಯುತ್ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡು, ಮುಳುಗಡೆ ಸಂತ್ರಸ್ತರಾಗಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಅಣು ಸ್ಥಾವರ ನಿರ್ಮಾಣದ ಪ್ರಸ್ತಾಪ ಕೇಳಿಬಂದಿರುವುದು ಜನರಲ್ಲಿ ತೀವ್ರ ಆಘಾತ ಮೂಡಿಸಿದೆ. ಹಾಗಾಗಿ, ಈ ಮಾರಕ ಯೋಜನೆಯನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ಮಲೆನಾಡಿನ ಸಮಸ್ತ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅಣು ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರೂ ಆದ ಇಂಧೂದರ ಗೌಡ ಬೇಸೂರು ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಪರಿಸರವಾದಿ ಸೀತಾರಾಮ್, ಕಡೂರು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿನಯ್ ದುಮ್ಮ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಯರಾಮ್ ಹಾಗೂ ಕಲ್ಯಾಣಪ್ಪ ಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment