ಹೊಸನಗರ: ನಿಯಮ ಉಲ್ಲಂಘಿಸಿ ಫುಡ್‌ಕೋರ್ಟ್ ನಿರ್ಮಾಣ ಆರೋಪ; ತಹಶೀಲ್ದಾರರಿಗೆ ಪಿಡಬ್ಲ್ಯೂಡಿ ಪತ್ರ

Photo of author

By vishwachetana807@gmail.com

​ಹೊಸನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಬದಿಯಲ್ಲೇ ಅನಧಿಕೃತವಾಗಿ ಫುಡ್‌ಕೋರ್ಟ್ ನಿರ್ಮಾಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಹೊಸನಗರ ತಹಶೀಲ್ದಾರರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ಹೊಸನಗರ: ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಬದಿಯಲ್ಲೇ ಅನಧಿಕೃತವಾಗಿ ಫುಡ್‌ಕೋರ್ಟ್ ನಿರ್ಮಾಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಹೊಸನಗರ ತಹಶೀಲ್ದಾರರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

​ರಾಷ್ಟ್ರೀಯ ಹೆದ್ದಾರಿ 766C (ಬೈಂದೂರು – ರಾಣೇಬೆನ್ನೂರು ಸೆಕ್ಷನ್) ಕಿಲೋಮೀಟರ್ 88.100 ರ ರಸ್ತೆಯ ಎಡಭಾಗದಲ್ಲಿ ನಿಯಮಬಾಹಿರವಾಗಿ ಫುಡ್‌ಕೋರ್ಟ್ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ಇಲಾಖೆಗೆ ದೂರವಾಣಿ ಮೂಲಕ ಸರಣಿ ದೂರುಗಳನ್ನು ನೀಡಿದ್ದರು. ಈ ದೂರುಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಅಧಿಕಾರಿಗಳ ಪರಿಶೀಲನೆ ವೇಳೆ, ರಸ್ತೆಯ ಎಡಭಾಗದ ಚರಂಡಿಯ ಅಂಚಿನಲ್ಲೇ ಫುಡ್‌ಕೋರ್ಟ್‌ಗಾಗಿ ಪೇವರ್ ಟೈಲ್ಸ್ ಅಳವಡಿಸಿರುವುದು ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಪಾಯ ತೆಗೆದಿರುವುದು ಪತ್ತೆಯಾಗಿದೆ.

ಸರ್ಕಾರ ಹಾಗೂ ಕೇಂದ್ರ ಭೂಸಾರಿಗೆ ಸಚಿವಾಲಯದ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ ಕನಿಷ್ಠ 40 ಮೀಟರ್ ದೂರದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬೇಕಿರುತ್ತದೆ. ಆದರೆ, ಈ ಸ್ಥಳದಲ್ಲಿ ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೇ, ರಸ್ತೆಗೇ ತೀರಾ ಹೊಂದಿಕೊಂಡಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೆದ್ದಾರಿಯ ತೀರಾ ಹತ್ತಿರದಲ್ಲೇ ಇಂತಹ ವಾಣಿಜ್ಯ ಮಳಿಗೆಗಳು ತಲೆಎತ್ತುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಲಿದ್ದು, ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಕೇಂದ್ರ ಭೂಸಾರಿಗೆ ಸಚಿವಾಲಯದ ನಿಯಮಗಳ ಪ್ರಕಾರ ಪೂರ್ವಾನುಮತಿ ಪಡೆಯದೇ ನಡೆಯುತ್ತಿರುವ ಈ ಅನಧಿಕೃತ ನಿರ್ಮಾಣ ಕಾರ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೊಸನಗರ ತಹಶೀಲ್ದಾರರಿಗೆ ಕೋರಲಾಗಿದೆ. ಈ ಪತ್ರದ ಪ್ರತಿಯನ್ನು ಅಗತ್ಯ ಕ್ರಮಕ್ಕಾಗಿ ಹೊಸನಗರ ತಾಲ್ಲೂಕು ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೂ ರವಾನಿಸಲಾಗಿದೆ.

ಬರಹ: Chetandas Hosamane

Leave a Comment