
ಶಿವಮೊಗ್ಗ: ದೇಶದ ಬೊಕ್ಕಸವನ್ನು ದಶಕಗಳ ಕಾಲ ಲೂಟಿ ಮಾಡಿದ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರಭಕ್ತಿ ಮತ್ತು ಮಿತವ್ಯಯದ ದೂರದೃಷ್ಟಿಯ ಪಾಠ ಅರ್ಥವಾಗುತ್ತಿಲ್ಲ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, ದೇಶದ ಹಿತದೃಷ್ಟಿಯಿಂದ ಮೋದಿಯವರು ಜನರಲ್ಲಿ ಶಿಸ್ತು ಮತ್ತು ಮಿತವ್ಯಯದ ಬಗ್ಗೆ ಮಾಡಿರುವ ಮನವಿಯನ್ನು “ವೈಫಲ್ಯ” ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರ ನಡೆ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಕರೆದಿದ್ದಾರೆ.


ಕಾಂಗ್ರೆಸ್ ನಾಯಕರು ಮೋದಿಯವರನ್ನು ಪ್ರಶ್ನಿಸುವ ಮೊದಲು ತಮ್ಮ ಪಕ್ಷದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಲಿ ಎಂದ ಅವರು, 1970ರಲ್ಲಿ ಇಂದಿರಾ ಗಾಂಧಿಯವರು ‘Compulsory Deposit Scheme’ ಮೂಲಕ ನೌಕರರ ವೇತನದ ಒಂದು ಭಾಗವನ್ನು ಕಸಿದುಕೊಂಡಿದ್ದರು. 2012ರಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಆರ್ಥಿಕತೆ ಕುಸಿದಾಗ ‘ಚಿನ್ನ ಖರೀದಿಸಬೇಡಿ’ ಎಂದು ಜನರಲ್ಲಿ ಬೇಡಿಕೊಂಡಿದ್ದರು. ಅಲ್ಲದೆ, ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ಸಿಗರ ಇಂತಹ ಆರ್ಥಿಕ ಅಶಿಸ್ತಿನಿಂದಾಗಿ ಭಾರತವು ವಿಶ್ವದ ‘ದುರ್ಬಲ ಆರ್ಥಿಕತೆ’ (Fragile Five) ಪಟ್ಟಿಗೆ ಸೇರಿತ್ತು ಎಂಬ ಸತ್ಯವನ್ನು ರಾಹುಲ್ ಗಾಂಧಿ ಮರೆತಂತಿದೆ ಎಂದು ಲೇವಡಿ ಮಾಡಿದ್ದಾರೆ.
ಮೋದಿಯವರು ಇಂಧನ ಉಳಿಸಿ ಅಥವಾ ಮೆಟ್ರೋ ಬಳಸಿ ಎಂದು ಹೇಳುತ್ತಿರುವುದು ಮುಂದಿನ ಪೀಳಿಗೆಗೆ ಮಾಲಿನ್ಯಮುಕ್ತ ಪರಿಸರ ನೀಡಲು. ವಿದೇಶಿ ವ್ಯಾಮೋಹ ಬಿಡಿ ಎನ್ನುವುದು ‘ಆತ್ಮನಿರ್ಭರ ಭಾರತ’ದ ಸಂಕಲ್ಪವೇ ಹೊರತು ಅಸಹಾಯಕತೆಯಲ್ಲ. ರೈತರಿಗೆ ರಸಗೊಬ್ಬರ ಕಡಿಮೆ ಬಳಸಿ ಎನ್ನುತ್ತಿರುವುದು ಮಣ್ಣಿನ ಫಲವತ್ತತೆ ಮತ್ತು ವಿಷಮುಕ್ತ ಕೃಷಿಗಾಗಿ ಎಂದು ಚನ್ನಬಸಪ್ಪ ಸ್ಪಷ್ಟಪಡಿಸಿದರು. ಹಗರಣಗಳಲ್ಲೇ ಮುಳುಗಿ ದೇಶವನ್ನು ಭಿಕ್ಷಾಪಾತ್ರೆಯೊಂದಿಗೆ ನಿಲ್ಲಿಸಿದ್ದ ಕಾಂಗ್ರೆಸ್ಸಿಗರಿಗೆ ಮೋದಿಯವರ ತ್ಯಾಗದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ವಿದೇಶಿ ಮಣ್ಣಿನಲ್ಲಿ ನಿಂತು ಸ್ವದೇಶವನ್ನು ನಿಂದಿಸುವ ರಾಹುಲ್ ಗಾಂಧಿಯವರಿಗೆ ದೇಶಭಕ್ತಿಯ ಪಾಠ ತಿಳಿಯದು. ಹನ್ನೆರಡು ವರ್ಷ ಆಡಳಿತದ ನಂತರವೂ ದೇಶಕ್ಕೆ ಮಾರ್ಗದರ್ಶನ ನೀಡುವ ಪ್ರಧಾನಿ ನಮಗೆ ಬೇಕೇ ಹೊರತು, ದೇಶದ ಹಿತ ಯೋಚಿಸದ ದಿವಾಳಿ ನಾಯಕರು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ಸಿಗರ ಈ ಕಪಟ ನಾಟಕಕ್ಕೆ ದೇಶದ ಜನತೆ ಈಗಾಗಲೇ ತಕ್ಕ ಪಾಠ ಕಲಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲದಂತಾಗಲಿದೆ ಎಂದು ಅವರು ಹೇಳಿದ್ದಾರೆ.
ಬರಹ: Chetandas Hosamane









