ರಿಪ್ಪನ್ ಪೇಟೆ: ಬಡವರ ಆಶ್ರಯ ಜಮೀನು ಒತ್ತುವರಿ, ರಬ್ಬರ್ ಬೆಳೆದಿದ್ದವರ ತೆರವಿಗೆ ತಹಶೀಲ್ದಾರ್ ಖಡಕ್ ಆದೇಶ

Photo of author

By vishwachetana807@gmail.com

ಹೊಸನಗರ: ತಾಲೂಕಿನ ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದಲ್ಲಿ ಬಡವರ ವಸತಿಗಾಗಿ ಮೀಸಲಿಟ್ಟಿದ್ದ ಆಶ್ರಯ ಯೋಜನೆಯ ಜಮೀನನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕಂದಾಯ ಇಲಾಖೆ ಚಾಟಿ ಬೀಸಿದೆ. ಅನಧಿಕೃತ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಿ, ಜಮೀನನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಹೊಸನಗರ ತಹಶೀಲ್ದಾರ್ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?
1991-92ನೇ ಸಾಲಿನಲ್ಲಿ ಗವಟೂರು ಗ್ರಾಮದ ಸರ್ವೆ ನಂಬರ್ 260/2 ರಲ್ಲಿ 23 ಫಲಾನುಭವಿಗಳಿಗೆ 0.23 ಎಕರೆ (23 ಗುಂಟೆ) ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನಗಳಾಗಿ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಸರ್ಕಾರದ ವತಿಯಿಂದ ಕಡಿಮೆ ವೆಚ್ಚದ ಮನೆ ನಿರ್ಮಿಸಲು ಅನುಕೂಲವಾಗುವಂತೆ, ಸದರಿ ಜಮೀನನ್ನು ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಕೋರಿ ಶ್ರೀ ಶೇಖರಪ್ಪ ಎಂಬುವವರು ದಿನಾಂಕ. 23, 2025 ರಂದು ಅರ್ಜಿ ಸಲ್ಲಿಸಿದ್ದರು.

ಬಯಲಾದ ಒತ್ತುವರಿಯ ಅಸಲಿಯತ್ತು
ಅರ್ಜಿಯ ಮೇರೆಗೆ ತಾಲೂಕು ಸರ್ವೇಯರ್ ಮತ್ತು ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದಾಗ ಸರ್ಕಾರಿ ಜಾಗದ ಒತ್ತುವರಿ ಬಯಲಾಗಿದೆ. ಜಾಗದಲ್ಲಿ ಶ್ರೀ ಪವನ್ ಬಿನ್ ವೆಂಕಪ್ಪ ಶೆಟ್ಟಿ ಎಂಬುವವರು ಅನಧಿಕೃತವಾಗಿ ರಬ್ಬರ್ ಬೆಳೆ ಬೆಳೆದಿದ್ದರೆ, ಹೆಚ್. ಎಸ್. ಪ್ರಭಾಕರ್ ಬಿನ್ ಶಂಕರಪ್ಪ ಎಂಬುವವರು ಬೇಲಿ ನಿರ್ಮಿಸಿ ಜಾಗ ಕಬಳಿಸಿರುವುದು ವರದಿಯಲ್ಲಿ ದೃಢಪಟ್ಟಿದೆ.

ತಹಶೀಲ್ದಾರ್ ಆದೇಶದಲ್ಲಿ ಏನಿದೆ?
ಈ ತನಿಖಾ ವರದಿಯ ಆಧಾರದ ಮೇಲೆ, ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 94 (3) ಮತ್ತು (4) ರ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತಹಶೀಲ್ದಾರ್ ಆದೇಶಿಸಿದ್ದಾರೆ. ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಅವರಿಂದ ಸೂಕ್ತ ಪೊಲೀಸ್ ರಕ್ಷಣೆ ಪಡೆದು, ತಕ್ಷಣವೇ ಒತ್ತುವರಿ ತೆರವುಗೊಳಿಸಬೇಕು. ಬಳಿಕ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದು ಛಾಯಾಚಿತ್ರದೊಂದಿಗೆ ತುರ್ತಾಗಿ ಪಾಲನಾ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬರಹ: Chetandas Hosamane

Leave a Comment