
ರಾಜ್ಯ ಕಾಂಗ್ರೆಸ್ ಸರ್ಕಾರವು ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಸಾಧನಾ ಸಮಾವೇಶ’ವು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ ಮತ್ತು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, ಸರ್ಕಾರದ ಆಡಳಿತ ಕೇವಲ ಭ್ರಷ್ಟಾಚಾರ, ಅಕ್ರಮ ಹಾಗೂ ಜನರ ಬಗ್ಗೆ ನಿಷ್ಕಾಳಜಿಗೆ ಸೀಮಿತವಾಗಿದ್ದು, ಸಾಧನೆಯಲ್ಲಿ ಶೂನ್ಯ ಹಾಗೂ ಲೂಟಿಯಲ್ಲಿ ಅಗ್ರಗಣ್ಯವಾಗಿದೆ ಎಂದು ಆರೋಪಿಸಿದ್ದಾರೆ. ದೂರದೃಷ್ಟಿಯಿಲ್ಲದ ಹಣಕಾಸು ನಿರ್ವಹಣೆಯಿಂದ ರಾಜ್ಯದ ಬೊಕ್ಕಸ ಬರಿದಾಗಿದ್ದು, ಆಡಳಿತ ಪಕ್ಷದ ನಾಯಕರು ಕೇವಲ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಸಣ್ಣ ಮಳೆಗೂ ತತ್ತರಿಸುತ್ತಿರುವ ಬೆಂಗಳೂರಿನ ಹೊಂಡ-ಗುಂಡಿಗಳ ರಸ್ತೆಗಳು ಸರ್ಕಾರದ ‘ಬ್ರಾಂಡ್ ಬೆಂಗಳೂರು’ ಘೋಷಣೆಯನ್ನು ಅಣಕಿಸುತ್ತಿವೆ ಎಂದು ಅವರು ದೂರಿದ್ದಾರೆ. ರಾಜ್ಯದಲ್ಲಿ ಮುಡಾ, ಕೆಪಿಎಸ್‌ಸಿ, ಕೆಐಎಡಿಬಿ ಹಗರಣಗಳು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿಗಳ ದುರ್ಬಳಕೆಯು ಸರ್ಕಾರದ ಸಾಂಸ್ಥಿಕ ಭ್ರಷ್ಟಾಚಾರವನ್ನು ಬಯಲು ಮಾಡಿವೆ ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ, ಗುತ್ತಿಗೆದಾರರಿಂದ ಬರೋಬ್ಬರಿ 60% ಕಮಿಷನ್ ದಂಧೆ ನಡೆಯುತ್ತಿದ್ದು, ಪ್ರಾಮಾಣಿಕರನ್ನು ಆತ್ಮಹತ್ಯೆಯ ಹಾದಿಗೆ ತಳ್ಳಲಾಗಿದೆ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಒಳ ಮೀಸಲಾತಿಯ ಸೂಕ್ಷ್ಮ ವಿಚಾರವನ್ನು ರಾಜಕಾರಣಕ್ಕೆ ಬಳಸಿ, ಈ ಹಿಂದೆ ಇದ್ದ ಹೆಚ್ಚುವರಿ ಮೀಸಲಾತಿಯನ್ನು ಕಡಿತಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ

’ಪಂಜಾಬ್’ ಮಾದರಿಯಲ್ಲಿ ರಾಜ್ಯದೆಲ್ಲೆಡೆ ಡ್ರಗ್ಸ್ ಹಾವಳಿ ಮಿತಿಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಬ್ಬು ಮತ್ತು ಭತ್ತದ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡದೆ ಅನ್ನದಾತರನ್ನು ಬೀದಿಯಲ್ಲಿ ನಿಲ್ಲಿಸಲಾಗಿದೆ. ಬೌರಿಂಗ್ ಆಸ್ಪತ್ರೆಯ ನಿರ್ವಹಣಾ ವೈಫಲ್ಯದಿಂದ ಏಳು ಅಮಾಯಕರ ಸಾವು, ಮೈಸೂರಿನ ಚೆಲುವಾಂಬಾ ಆಸ್ಪತ್ರೆಯಲ್ಲಿ ನೂರಾರು ನವಜಾತ ಶಿಶುಗಳ ಸಾವು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಔಷಧ, ಡಯಾಲಿಸಿಸ್ ಕೊರತೆ ಇವು ಆರೋಗ್ಯ ಇಲಾಖೆಯ ನಿರ್ಲಜ್ಜ ಮೌನಕ್ಕೆ ಸಾಕ್ಷಿಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರ್ಥಿಕತೆ, ಕಾನೂನು ಸುವ್ಯವಸ್ಥೆ, ಕೃಷಿ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗದಲ್ಲೂ ಸಂಪೂರ್ಣ ದಿವಾಳಿಯಾಗಿರುವ ಈ ಸರ್ಕಾರಕ್ಕೆ ಕನಿಷ್ಠ ನೈತಿಕ ಜವಾಬ್ದಾರಿ ಇದ್ದರೆ, ಪ್ರಚಾರದ ತಂತ್ರಗಳನ್ನು ನಿಲ್ಲಿಸಿ ತಕ್ಷಣವೇ ಅಧಿಕಾರದಿಂದ ಕೆಳಗಿಳಿದು ಜನತೆಯ ಕ್ಷಮೆಯಾಚಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಮತದಾರರು ತಮ್ಮ ಒಂದೊಂದು ಮತದಿಂದ ಈ ಭ್ರಷ್ಟ ಸರ್ಕಾರದ ಅಹಂಕಾರವನ್ನು ಪುಡಿಪುಡಿ ಮಾಡಿ, ಈ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೆಸೆಯಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬರಹ: Chetandas Hosamane









