ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಗುರುಶಕ್ತಿ ಬಸ್ ಶಿರಾ ಬಳಿ ಅಪಘಾತ: ಚಾಲಕ ಸಂದೀಪ್ ಸೇರಿದಂತೆ ಹಲವರಿಗೆ ಗಾಯ

Photo of author

By vishwachetana807@gmail.com

​ಹೊಸನಗರ: ತುಮಕೂರು ಜಿಲ್ಲೆಯ ಶಿರಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ 4:00 ಗಂಟೆ ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ‘ಗುರುಶಕ್ತಿ’ ಖಾಸಗಿ ಸ್ಲೀಪರ್ ಬಸ್, ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಈರುಳ್ಳಿ ಲೋಡ್ ಹೊತ್ತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ನಡೆದಿದೆ.

​ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನ ಮುಂಭಾಗ ಜಖಂಗೊಂಡಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವು ನೀಡಿದರು.

ಘಟನೆಯಲ್ಲಿ ಬಸ್ ಚಾಲಕ ಸಂದೀಪ್ (ಸ್ಯಾಂಡಿ) ಅವರ ಕಾಲಿಗೆ ಗಾಯಗಳಾಗಿದ್ದು, ಇತರ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದ ನಂತರ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಬಂದು ಸಂಚಾರವನ್ನು ಸುಗಮಗೊಳಿಸಿದರು. ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಗುರಿ ತಲುಪುವುದು ಅರ್ಧ ಗಂಟೆ ತಡವಾದರೂ ಚಿಂತೆಯಿಲ್ಲ; ಪ್ರಯಾಣಿಕರು ಹಾಗೂ ನಿಮ್ಮ ಜೀವದ ಸುರಕ್ಷತೆಗಿಂತ ಬೇರಾವುದೂ ದೊಡ್ಡದಲ್ಲ.

ವೇಗಕ್ಕಿಂತ ಜೀವ ಮುಖ್ಯ. ಎಚ್ಚರವಿರಲಿ, ಸುರಕ್ಷಿತ ಪ್ರಯಾಣ ನಿಮ್ಮದಾಗಲಿ.
– ಸಂಪಾದಕರು

ಬರಹ: Chetandas Hosamane

Leave a Comment