“Sagara-Hosanagara ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಿ – ಬಿ.ಜಿ. ಚಂದ್ರಮೌಳಿ ಮತ್ತು ಕಾಂಗ್ರೆಸ್ ಪದಾಧಿಕಾರಿಗಳ ಆಗ್ರಹ.”

Photo of author

By vishwachetana807@gmail.com


ಹೊಸನಗರ: ಸಾಗರ-ಹೊಸನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಪಟ್ಟಣದ ಗಾಂಧಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ. ಚಂದ್ರಮೌಳಿ ಅವರು, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ, ಸದಾ ಜನರೊಂದಿಗೆ ಇರುವ ನಾಯಕರಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ಒಲಿದುಬಂದರೆ ಈ ಭಾಗದ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗುತ್ತದೆ ಹಾಗೂ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ” ಎಂದು ಹಕ್ಕೊತ್ತಾಯ ಮಂಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ರಿಪ್ಪನ್‌ಪೇಟೆ ಭಾಗದ ಪ್ರಮುಖ ಮುಖಂಡರಾದ ಉಬೇದುಲ್ಲಾ ಶರೀಫ್ ಅವರು ಮಾತನಾಡಿ, ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಬಲವಾಗಿ ಆಗ್ರಹಿಸಿದರು. “ಕ್ಷೇತ್ರದಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಮತ್ತು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯ ನಾಯಕರು ಈ ಭಾಗದ ಜನತೆಗೆ ನ್ಯಾಯ ಒದಗಿಸಬೇಕು,” ಎಂದು ಅವರು ಒತ್ತಾಯಿಸಿದರು.

ಮಹಿಳಾ ಘಟಕದ ಅಧ್ಯಕ್ಷರಾದ ಸುಮಾ ಸುಬ್ರಹ್ಮಣ್ಯ ಅವರು ಮಾತನಾಡಿ, “ಶಾಸಕರು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವ ನಾಯಕರಾಗಿದ್ದು, ಕಷ್ಟಗಳಿಗೆ ಸದಾ ಸ್ಪಂದಿಸುತ್ತಾರೆ. ಅವರು ಈಗಾಗಲೇ ಮೂರು ಬಾರಿ ಶಾಸಕರಾಗಿ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ, ಹೊಸನಗರ ತಾಲೂಕಿನ ಎಲ್ಲಾ ಮಹಿಳೆಯರ ಪರವಾಗಿ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ನಾವು ವರಿಷ್ಠರನ್ನು ಬಲವಾಗಿ ಆಗ್ರಹಿಸುತ್ತೇವೆ,” ಎಂದು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಎಂ.ಪಿ. ಸುರೇಶ್, ಹಿರಿಯ ಮುಖಂಡರಾದ ಜೈಶೀಲಪ್ಪಗೌಡ, ಏರಗಿ ಉಮೇಶ್, ಪ್ರಭಾಕರ್ ರಾವ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್ ಕೆ.ಎಸ್., ನೇತ್ರಾವತಿ, ಆಶ್ರಯ ಸಮಿತಿ ಸದಸ್ಯರಾದ ರಾಧಿಕಾ ರತ್ನಾಕರ್ ಶೆಟ್ಟಿ, ಬಗರ್ ಹುಕುಂ ಸಮಿತಿ ಸದಸ್ಯರಾದ ನಾಗರಾಜ್ ಕಡೆಕಲ್, ಸಾಕಮ್ಮ, ಸಣ್ಣಕ್ಕಿ ಮಂಜು, ಉಮಾಕರ್, ಗೋಪಿನಾಥ್ ಜಯನಗರ, ಕೌಶಿಕ್ ಬಂಡಾರಿ, ಪ್ರವೀಣ್ ಬೃಂದಾವನ, ಜಯನಗರ ಗುರು ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬರಹ: ಚೇತನ್ ದಾಸ್ ಹೊಸಮನೆ

Leave a Comment