
ಹೊಸನಗರ, : ರಿಪ್ಪನ್ಪೇಟೆ, ಜುಲೈ 25: ರಿಪ್ಪನ್ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ಭಾರಿ ಗಾಳಿ-ಮಳೆಯ ಸಂದರ್ಭ ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಹಿರೆಸಾನಿ ಗ್ರಾಮದ ಶೇಖರಪ್ಪ ಅವರ ಪುತ್ರಿ ನಿಖಿತಾ ಎಂದು ಗುರುತಿಸಲಾಗಿದೆ. ನಿಖಿತಾ ಅವರು ಗರ್ತಿಕೆರೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತಿದ್ದು ತರಗತಿ ಮುಗಿಸಿ ಇಬ್ಬರು ಸ್ನೇಹಿತರೊಂದಿಗೆ ಶುಕ್ರವಾರ ಸಂಜೆ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಮಾರ್ಗ ಮಧ್ಯೆ ಭಾರಿ ಗಾಳಿ ಮತ್ತು ಮಳೆಯ ಪರಿಣಾಮ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿರುವುದನ್ನು ಗಮನಿಸಿದ ಮೂವರು ವಿದ್ಯಾರ್ಥಿಗಳು ಸುರಕ್ಷತೆಗಾಗಿ ಹಿಂದಕ್ಕೆ ಸರಿದು ಓಡಲು ಮುಂದಾಗಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿದ್ದ ದೊಡ್ಡ ಮರವೊಂದು ಏಕಾಏಕಿ ಉರುಳಿ ನಿಖಿತಾ ಅವರ ಮೇಲೆ ಬಿದ್ದಿದೆ.

ಘಟನೆಯ ಪರಿಣಾಮ ನಿಖಿತಾ ಅವರ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಕಾಲು ಸಂಪೂರ್ಣವಾಗಿ ಮುರಿದಿರುವುದಾಗಿ ತಿಳಿದುಬಂದಿದೆ. ತೀವ್ರ ನೋವಿನಿಂದ ವಿದ್ಯಾರ್ಥಿನಿ ಕೂಗಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ತಕ್ಷಣವೇ ಧಾವಿಸಿ ರಕ್ಷಣೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಗಾಯದ ತೀವ್ರತೆಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯವಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ಸೂಚಿಸಿದರು. ಅದರಂತೆ ವಿದ್ಯಾರ್ಥಿನಿಯನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮಾಹಿತಿ ಪಡೆದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವಿದ್ಯಾರ್ಥಿನಿಯ ಚಿಕಿತ್ಸೆಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಮೂಲಕ ಆರ್ಥಿಕ ನೆರವು ದೊರಕುವಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಬರಹ: Chetandas Hosamane









