ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ: 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

Photo of author

By vishwachetana807@gmail.com

ಮಾರಾಟದ ಉದ್ದೇಶದಿಂದ ಕಾರಿನಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನಲಾದ ಮಾಂಸ ಪತ್ತೆ; ದಾಳಿ ವೇಳೆ ಆರೋಪಿಗಳು ಪರಾರಿ

ರಿಪ್ಪನ್‌ಪೇಟೆ: ಮಾರಾಟದ ಉದ್ದೇಶದಿಂದ ಕಾರಿನಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನಲಾದ ಸುಮಾರು 21 ಕೆ.ಜಿ. ಜಿಂಕೆ ಮಾಂಸವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಪಟ್ಟಣದ ಶಬರೀಶ ನಗರದಲ್ಲಿ ನಡೆದಿದೆ.

ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಶಬರೀಶ ನಗರದಲ್ಲಿ ದಾಳಿ ನಡೆಸಿದ ವೇಳೆ, ಮಾರುತಿ ಎರ್ಟಿಗಾ ಕಾರಿನಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಮಾಂಸದೊಂದಿಗೆ ಕಾರನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಶಬರೀಶ ನಗರ ನಿವಾಸಿ ಗುರುರಾಜ್, ಕಾರಗೋಡು ನಿವಾಸಿ ಹಾಗೂ ಹೊಸನಗರ ತಾಲೂಕು ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ಎಂದು ಗುರುತಿಸಲ್ಪಟ್ಟಿರುವ ಗಣೇಶ್ ಕೆ.ಜಿ. ಸೇರಿದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದೆ.

ದಾಳಿಯಲ್ಲಿ ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಭಾಗವಹಿಸಿದ್ದರು.

ಬರಹ: Chetandas Hosamane

Leave a Comment