ಗಾಂಧೀಜಿಯವರ ವಿಚಾರಧಾರೆ ಇಂದಿಗೂ ಪ್ರಸ್ತುತ: ಕೊಡಚಾದ್ರಿ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

Photo of author

By vishwachetana807@gmail.com

ಹೊಸನಗರ: “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂಬ ಭಗವದ್ಗೀತೆಯ ಸಂದೇಶವನ್ನು ಮಹಾತ್ಮ ಗಾಂಧೀಜಿಯವರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದರು. ಮಾಡುವ ಕೆಲಸದಲ್ಲಿ ತೃಪ್ತಿ ಕಾಣಬೇಕೇ ಹೊರತು ಅದರ ಪ್ರತಿಫಲದಲ್ಲಿ ಅಲ್ಲ ಎಂದು ಕೊಡಚಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರಾಜು ಹೇಳಿದರು.

ಕೊಡಚಾದ್ರಿ ಕಾಲೇಜಿನಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಗಾಂಧೀ ಎಂಬುದು ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ; ಅದೊಂದು ವಿಚಾರ, ಸಿದ್ಧಾಂತ. ಅವರ ಬದುಕೇ ಒಂದು ಸಂದೇಶವಾಗಿದೆ ಎಂದರು.

ನಂತರ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಪತಿ ಹಳಗುಂದ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆಯನ್ನು ಉಲ್ಲೇಖಿಸಿ, ದೇಶಕ್ಕಾಗಿ ಬದುಕಿ, ಮಡಿದ ಮಹನೀಯರು ನಮ್ಮ ನಿತ್ಯದ ಆದರ್ಶಗಳಾಗಬೇಕೇ ಹೊರತು ಕೇವಲ ಜಯಂತಿಗಳಿಗೆ ಮಾತ್ರ ಸೀಮಿತವಾಗಬಾರದು. ಗಾಂಧೀಜಿಯವರ ವಿಚಾರಧಾರೆ ಇಂದಿನ ಪ್ರಪಂಚಕ್ಕೂ ಪ್ರಸ್ತುತವಾಗಿದೆ ಎಂದರು. “ನಾವೆಲ್ಲರೂ ಮೋಹಾತ್ಮರಾಗಿದ್ದೇವೆ; ಮಹಾತ್ಮರಾಗಲು ಪ್ರಯತ್ನಿಸಬೇಕು” ಎಂದು ಅವರು ಹೇಳಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥ ದೊಡ್ಡಯ್ಯ ಹೆಚ್. ಮಾತನಾಡಿ, ಪ್ರಪಂಚದ ಒಂದಲ್ಲ ಒಂದು ಭಾಗದಲ್ಲಿ ಗಾಂಧೀಜಿಯವರನ್ನು ನಿರಂತರವಾಗಿ ಸ್ಮರಿಸಲಾಗುತ್ತಿದೆ. ಬದುಕಿದ್ದ ಗಾಂಧಿಗಿಂತಲೂ ಅವರು ನಿಧನರಾದ ನಂತರ ಅವರ ವಿಚಾರಗಳು ಮತ್ತಷ್ಟು ಪ್ರಸ್ತುತವಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಾಲಿನಿ ಬಿ.ಎನ್. ಮಾತನಾಡಿ, ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳತೆ, ಸ್ವಚ್ಛತೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳು ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ಈ ಬದಲಾವಣೆ ನಮ್ಮಿಂದಲೇ ಆರಂಭವಾಗಿ ರಾಷ್ಟ್ರಮಟ್ಟದವರೆಗೆ ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಅಧ್ಯಾಪಕರು, ಐಕ್ಯೂಎಸಿ ಸಂಚಾಲಕ ಮಂಜುನಾಥ್ ಡಿ., ರಾಸೇಯೋ ಕಾರ್ಯಕ್ರಮಾಧಿಕಾರಿ ಮೇದಿನಿ ಕೆ.ಎಸ್., ರೇಂಜರ್ಸ್ ಲೀಡರ್ ಸುಪ್ರಿಯಾ ಬಾಬಾ ನಾಯ್ಕ, ಎನ್‌ಎಸ್‌ಎಸ್, ರೋವರ್ಸ್–ರೇಂಜರ್ಸ್ ಹಾಗೂ ರೆಡ್ ಕ್ರಾಸ್ ಸ್ವಯಂಸೇವಕರು ಉಪಸ್ಥಿತರಿದ್ದರು.


ವೇದಿಕೆ ಕಾರ್ಯಕ್ರಮದ ಬಳಿಕ ಕಾಲೇಜಿನ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

ಬರಹ: Chetandas Hosamane

Leave a Comment