ಸಮಾಜಸೇವೆ ಮತ್ತು ಸಂಘಟನಾ ಬಲದೊಂದಿಗೆ ನಗರ ಜಿಲ್ಲಾ ಪಂಚಾಯತ್ ರಾಜಕೀಯದತ್ತ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹೆಜ್ಜೆ.

ಹೊಸನಗರ: ಯುವಜನರನ್ನು ಒಗ್ಗೂಡಿಸಿ ಸಂಘಟನಾ ಶಕ್ತಿಯನ್ನು ಮೆರೆಯುವುದು ಹಾಗೂ ಶಿಕ್ಷಣ ಮತ್ತು ಸಮಾಜಸೇವೆಯ ಮೂಲಕ ತಳಮಟ್ಟದಿಂದ ಗುರುತಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು ಕಳೆದ ಕೆಲವು ವರ್ಷಗಳಿಂದ ನಡೆದುಬಂದ ಹಾದಿಯೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಅವರು, ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆಯಿಲ್ಲದೆ, ಕೇವಲ ಜನರೊಂದಿಗಿನ ನಂಟು ಮತ್ತು ನಿಸ್ವಾರ್ಥ ಸೇವೆಯ ಮೂಲಕವೇ ಇಂದು ಜಿಲ್ಲಾ ಪಂಚಾಯತ್ ರಾಜಕೀಯ ವಲಯದಲ್ಲಿ ಗಮನಾರ್ಹ ಚರ್ಚೆಗೆ ಗ್ರಾಸವಾಗಿದ್ದಾರೆ.


ಹಿಂದಿನ ದಿನಗಳಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಸುಬ್ರಹ್ಮಣ್ಯ, ಗ್ರಾಮೀಣ ಪ್ರದೇಶದ ಯುವಕರಲ್ಲಿ ಕ್ರೀಡಾ ಸ್ಪೂರ್ತಿ ತುಂಬುವ ಹಾಗೂ ಕೌಶಲಾಭಿವೃದ್ಧಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದರು. ಕೇವಲ ಕ್ರೀಡೆಗೆ ಮಾತ್ರವಲ್ಲದೆ, ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಅವರು ಮಾಡಿದ ಕೆಲಸಗಳು ಹಿರಿಯರ ಗಮನ ಸೆಳೆದಿದ್ದವು.ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಹಾಗೂ ಕಾಲೇಜಿನಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗಬೇಕು ಎಂದು ಅವರು ಹಿಂದೆ ನಡೆಸಿದ ಪ್ರಯತ್ನಗಳು ಅನೇಕರಿಗೆ ಇಂದಿಗೂ ನೆನಪಿವೆ.

ಮಾನ್ಯ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕಲಗೋಡು ರತ್ನಾಕರ್, ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಮಂಜುನಾಥ್ ಗೌಡರಂತಹ ಪ್ರಮುಖ ಹಿರಿಯ ನಾಯಕರ ಒಡನಾಟವು ಇವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು, ಕಷ್ಟದಲ್ಲಿದ್ದವರಿಗೆ ಯಾವಾಗಲೂ ಕೈಲಾದ ಸಹಾಯ ಹಸ್ತ ಚಾಚುವ ಮೂಲಕ ‘ಕೊಡುಗೆ ದಾನಿ’ ಎಂಬ ಸಾರ್ಥಕ ಬಿರುಡಿಗೆ ಪಾತ್ರರಾಗಿದ್ದಾರೆ. ಕೇವಲ ನಗರ ಹೋಬಳಿ ಒಂದಲ್ಲದೆ, ಹೊಸನಗರ ತಾಲೂಕಿನ ಹಲವಾರು ಕ್ಷೇತ್ರಗಳಿಗೂ ವಿವಿಧ ರೂಪದಲ್ಲಿ ದಾನಿಗಳಾಗಿ ನೆರವು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಕಾಲೇಜು ಫೀಸ್ ಭರಿಸಲು ಅವರು ನೇರ ಆರ್ಥಿಕ ಧನಸಹಾಯ ನೀಡಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಉಚಿತವಾಗಿ ಪುಸ್ತಕಗಳು, ಬ್ಯಾಗುಗಳು ಹಾಗೂ ಲೇಖನ ಸಾಮಗ್ರಿಗಳನ್ನು ಒಳಗೊಂಡ ಕಿಟ್ಗಳನ್ನು ವಿತರಿಸಿ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಮಾತ್ರವಲ್ಲದೆ, ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿಯಲ್ಲಿ ಜನಸಾಮಾನ್ಯರು ಎದುರಿಸುತ್ತಿದ್ದ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ಸ್ಥಳೀಯ ಆಡಳಿತದ ಮೇಲೆ ಒತ್ತಡ ತಂದು ಪರಿಹಾರ ಒದಗಿಸಿದ್ದಾರೆ. ಸ್ಥಳೀಯ ಯುವಕರಿಗೆ ಉದ್ಯೋಗ ಮಾರ್ಗದರ್ಶನ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಯುವ ಜನತೆಯನ್ನು ಸನ್ಮಾರ್ಗದಲ್ಲಿ ನಡೆಸಲು ಭದ್ರವಾದ ವೇದಿಕೆ ಕಲ್ಪಿಸಿದ್ದಾರೆ. ಸಾರ್ವಜನಿಕರ ಕಷ್ಟದ ಸಮಯದಲ್ಲಿ, ವಿಶೇಷವಾಗಿ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಬಡವರ ವೈದ್ಯಕೀಯ ವೆಚ್ಚ ಭರಿಸಲು ತಮ್ಮ ಕೈಯಿಂದ ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ಜನಪರ ಕಾಳಜಿ ಮೆರೆದಿದ್ದಾರೆ.

ಇಂದಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಕೇವಲ ಭಾಷಣಗಳಿಗಿಂತ ಮಣ್ಣಿನ ಸಮಸ್ಯೆಗಳನ್ನು ಅರಿತು ಸ್ಪಂದಿಸುವ ನಾಯಕರ ಅಗತ್ಯ ಹೊಸನಗರ ಭಾಗಕ್ಕಿದೆ. ಈ ಹಿನ್ನೆಲೆಯಲ್ಲಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರ ಹಿಂದಿನ ಸಾಮಾಜಿಕ ಬದ್ಧತೆ, ಪಕ್ಷದ ಸಂಘಟನಾ ಅನುಭವ ಮತ್ತು ದಾನಶೀಲತೆಯ ಹಾದಿಯೇ ಅವರಿಗೆ ಶ್ರೀರಕ್ಷೆಯಾಗಲಿದೆ. ಯುವಕರ ಧ್ವನಿಯಾಗಿ, ಗ್ರಾಮೀಣ ಅಭಿವೃದ್ಧಿಯ ರೂವಾರಿಯಾಗಿ ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಲಿದ್ದಾರೆ ಎಂಬುದು ಈಗ ಕ್ಷೇತ್ರದ ಜನರ ಪ್ರಮುಖ ನಿರೀಕ್ಷೆಯಾಗಿದೆ.
ಬರಹ: Chetandas Hosamane









