​ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪಾಲಿನ ‘ಎರಡನೇ ತಾಯಿ’: ಹೊಸನಗರದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ

Photo of author

By vishwachetana807@gmail.com

ಹೊಸನಗರ: ಸಮಾಜದಲ್ಲಿ ಶಿಶು ಮತ್ತು ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಹಾಗೂ ಪುಟಾಣಿ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅನನ್ಯವಾದುದು. ಅವರು ಕೇವಲ ಸರ್ಕಾರಿ ಸೇವಕಿಯರಲ್ಲ, ಬದಲಿಗೆ ಮಕ್ಕಳ ಪಾಲಿನ “ಎರಡನೇ ತಾಯಿ” ಎಂದು ಶಾಸಕ ಅರಗ ಜ್ಞಾನೇಂದ್ರ ಹಾಗೂ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಬಣ್ಣಿಸಿದರು.

​ಹೊಸನಗರದಲ್ಲಿ ನಡೆದ ಐಸಿಡಿಎಸ್ (ICDS) 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಇವರ ಆರ್ಥಿಕ ಭದ್ರತೆಗೆ ಒತ್ತು ನೀಡಲಿ: ಶಾಸಕ ಅರಗ ಜ್ಞಾನೇಂದ್ರ
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅರಗ ಜ್ಞಾನೇಂದ್ರ ಅವರು, “3 ರಿಂದ 6 ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಬುನಾದಿಯನ್ನು ಭದ್ರಪಡಿಸುತ್ತಿದ್ದಾರೆ. ಕೋವಿಡ್ ಅಂತಹ ತುರ್ತು ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಇವರು ಸಲ್ಲಿಸಿದ ಸೇವೆ ಮರೆಯುವಂತಿಲ್ಲ. ಕೇವಲ ಅಲ್ಪ ಗೌರವಧನಕ್ಕೆ ಇವರ ಸೇವೆಯನ್ನು ಸೀಮಿತಗೊಳಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ಇವರ ಆರ್ಥಿಕ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು. ಆರೋಗ್ಯ ಭತ್ಯೆ, ವಾರ್ಷಿಕ ರಜೆ ಮತ್ತು ಪಿಂಚಣಿ ಸೌಲಭ್ಯಗಳನ್ನು ನೀಡಲು ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.

ವಿಶ್ವಕ್ಕೆ ಮಾದರಿಯಾದ ‘ಅಮ್ಮ’ಂದಿರ ಸೇವೆ: ಶ್ರೀ ಅಭಿನವ ಚನ್ನಬಸವ ಶ್ರೀಗಳು
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, “ಮಕ್ಕಳಿಗೆ ತಾಯಿಯಾಗಿ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ‘ಅಮ್ಮ’ ಎಂದರೆ ಅದು ಅಂಗನವಾಡಿ ಕಾರ್ಯಕರ್ತೆಯರು. ಇವರು ಮಾಡಬಲ್ಲ ಕೆಲಸವನ್ನು ದೊಡ್ಡ ದೊಡ್ಡ ಅಧಿಕಾರಿಗಳಿಂದಲೂ ಮಾಡಲು ಸಾಧ್ಯವಿಲ್ಲ. ಇವರ ಪ್ರಾಮಾಣಿಕ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇವರ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಹಾರೈಸಿದರು.

​ಮನವಿ ಸಲ್ಲಿಕೆ ಮತ್ತು ಗೌರವ ಸಮರ್ಪಣೆ:
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು. ಅಲ್ಲದೆ, ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗಣ್ಯರ ಉಪಸ್ಥಿತಿ:ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸ್ವತಂತ್ರ ಸಂಘಟನೆಯ ರಾಜ್ಯ ಅಧ್ಯಕ್ಷೆ ಬಿ. ಪ್ರೇಮಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಮಣಿ ಕೆ.ಎಲ್., ಜಿಲ್ಲಾ ಕಾರ್ಯದರ್ಶಿ ಭಾರತಿ, ತಾಲೂಕು ಅಧ್ಯಕ್ಷೆ ಶಾರದಾ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಶ್ರೀ ನಾರಾಯಣ ಗುರು ಮಲೆನಾಡು ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮುರುಳೀಧರ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕೆ.ಜಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಂದಿಹೊಳೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶಕುಂತಲಾ ಜಿ. ಅವರು ಕಾರ್ಯಕ್ರಮವನ್ನು ಅತ್ಯಂತ ಸಾಂಗವಾಗಿ ನಿರೂಪಿಸಿದರು. ಶ್ರೀಮತಿ ಪ್ರೇಮಾ ಪ್ರಾರ್ಥಿಸಿ, ಶ್ರೀಮತಿ ಲೀಲಾವತಿ ಸ್ವಾಗತಿಸಿದರೆ, ಶ್ರೀಮತಿ ಶಾರದಾ ಮೂಡುಗೊಪ್ಪ ವಂದಿಸಿದರು.

ಬರಹ: ತಂಡ, vishwachetana.com

Leave a Comment