Bike Accident : ಮಾವಿನಕಟ್ಟೆ ಬಳಿ ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Photo of author

By vishwachetana807@gmail.com

ಹೊಸನಗರ: ತಾಲೂಕು ಮಾವಿನಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡ ರಾತ್ರಿ (9 JAN ಶುಕ್ರವಾರ ) ನಡೆದಿದೆ.

ಮೃತ ವ್ಯಕ್ತಿಯನ್ನು ಚೇತನ್ ಮೊಗವೀರ ಎಂದು ಗುರುತಿಸಲಾಗಿದ್ದು, ಅವರು ಉಡುಪಿ ನಗರದಲ್ಲಿನ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ತಡ ರಾತ್ರಿ ಸುಮಾರು 8.45 ರಿಂದ 9.00 ಗಂಟೆ ನಡುವಿನ ಸಮಯದಲ್ಲಿ ಹೊಸನಗರದಿಂದ ತಮ್ಮ ಊರಾದ ಮಾವಿನಕಟ್ಟೆಗೆ ಎನ್‌ಎಸ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮಾವಿನಕಟ್ಟೆ ಬಳಿ ರಸ್ತೆ ಮಧ್ಯಭಾಗದಲ್ಲಿ ಗುಂಡಿ ತೆಗೆಯಲಾಗಿದ್ದು, ಜೊತೆಗೆ ಮೋರಿ ಕಾಮಗಾರಿಗಾಗಿ ಜಲ್ಲಿ ಹಾಗೂ ಮರಳನ್ನು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆದರೆ, ಅಲ್ಲಿ ಯಾವುದೇ ಸೂಚನಾ ಫಲಕ ಅಥವಾ ಎಚ್ಚರಿಕೆ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದಾಗಿ ಬೈಕ್ ಸವಾರ ಚೇತನ್ ಮೊಗವೀರ ಅವರು ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೇತನ್ ಮೊಗವೀರ ಅವರು ನಿನ್ನೆ ತಮ್ಮ ಊರಾದ ಮಾವಿನಕಟ್ಟೆಗೆ ಬಂದಿದ್ದರು. ಆದರೆ ತಡ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬದವರಿಗೆ ತುಂಬಲಾರದ ನಷ್ಟ ಉಂಟಾಗಿದೆ.

ಘಟನಾ ಸ್ಥಳಕ್ಕೆ ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡ ಹಾಗೂ ಉಪ ನಿರೀಕ್ಷಕ ಶಂಕರ್ ಗೌಡ ಪಾಟಿಲ್ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮೃತರಿಗೆ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಗ್ರಾಮದಲ್ಲಿ ದುಃಖ ಆವರಿಸಿದೆ.




Leave a Comment