ಹೊಸನಗರ: ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸೆ ಹಾಗೂ ಡಿ.31ರ ರಾತ್ರಿ ಸಂಬಂಧಿಸಿದ ಪ್ರಕರಣದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಜೈಲಿಗೆ ಸೇರಿರುವ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಸೇರಿದಂತೆ ವಿವಿಧ ಜನವಿರೋಧಿ ಸಮಸ್ಯೆಗಳ ವಿರುದ್ಧ ಜ.17ರಂದು ಶನಿವಾರ ಹೊಸನಗರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್, ಕಂದಾಯ, ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗಳ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸದಿದ್ದರೆ ಬಿಜೆಪಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳ ಹಿಂಪಡೆ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ ದುರುಪಯೋಗ ನಿಲ್ಲಿಸುವುದು, ಬಗರ್ ಹುಕುಂ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳ ರದ್ದುಪಡಿಸುವುದು, ಹೊಸನಗರ ತಾಲ್ಲೂಕಿನ ತೀವ್ರ ವಿದ್ಯುತ್ ಸಮಸ್ಯೆ ಪರಿಹಾರ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತದೆ ಎಂದರು.

ಈ ಬೃಹತ್ ಪ್ರತಿಭಟನೆಯಲ್ಲಿ ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ನಾಯಕರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದ್ಮಿನಿ ರಾವ್ ಮಾತನಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ವರ್ತೇಶ್, ಉಮೇಶ್ ಕಂಚಗಾರ್, ಆರ್.ಟಿ. ಗೋಪಾಲ್, ಹಾಲಗದ್ದೆ ಉಮೇಶ್, ಯುವರಾಜ್ ಗೌಡ್ರು, ಶ್ರೀಪತಿ ರಾವ್, ಆನಂದ್ ಮೆಣಸೆ, ಎ.ವಿ. ಮಲ್ಲಿಕಾರ್ಜುನ್, ವೀರೇಶ್ ಆಳವಳ್ಳಿ, ಕೆ.ವಿ. ಕೃಷ್ಣಮೂರ್ತಿ, ಮಂಜುನಾಥ್ ಸಂಜೀವ್ ಸೇರಿದಂತೆ ಇನ್ನಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.








1 thought on “ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯಕ್ಕೆ ಅಂತ್ಯವಾಗಬೇಕು; ಜ.17ರಂದು ಹೊಸನಗರದಲ್ಲಿ ಬೃಹತ್ ಪ್ರತಿಭಟನೆ – ಹರತಾಳು ಹಾಲಪ್ಪ”