ಬೆಂಗಳೂರು: ಜ.12:ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಗೆ ಅಂಕಿತ ಹಾಕಬಾರದೆಂದು ಬಿಜೆಪಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ದ್ವೇಷ ಭಾಷಣ ತಡೆ ಮಸೂದೆಗೆ ಅನುಮೋದನೆ ನೀಡದಂತೆ ಕೋರಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಾಯಕರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ದ್ವೇಷ ಭಾಷಣ ತಡೆ ಮಸೂದೆಗೆ ಅನುಮೋದನೆ ನೀಡದಂತೆ ಕೋರಿತು.


ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಈ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ. ಈ ಮಸೂದೆ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸಂವಿಧಾನದ ಅನುಚ್ಛೇದ 14, 19 ಮತ್ತು 21 ಗಳಿಗೆ ವಿರುದ್ಧವಾಗಿ ಈ ಕಾಯ್ದೆಯನ್ನು ರೂಪಿಸಲಾಗಿದ್ದು, ಇದು ಸಮಾನ ಹಕ್ಕು, ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಮಸೂದೆಗೆ ಅಂಕಿತ ಹಾಕಬಾರದೆಂದು ಬಿಜೆಪಿ ನಾಯಕರು ರಾಜ್ಯಪಾಲರಲ್ಲಿ ಮನವಿ ಮಾಡಿದರು.

ಭಾರತೀಯ ನ್ಯಾಯ ಸಂಹಿತೆಯಲ್ಲಿಯೇ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ವ್ಯವಸ್ಥೆ ಇರುವುದರಿಂದ, ಪ್ರತ್ಯೇಕ ವಿಧೇಯಕದ ಅಗತ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ದಮನ ಮಾಡುವ ಹುನ್ನಾರ ನಡೆಸುತ್ತಿದೆ ಎಂಬ ಆರೋಪವನ್ನೂ ಮಾಡಿದೆ.
ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಆಗಿದ್ದು, ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಮತ್ತು ನ್ಯಾಯದ ಹಿತದೃಷ್ಟಿಯಿಂದ ಈ ವಿಧೇಯಕವನ್ನು ತಡೆಯುವುದು ಸೂಕ್ತ ಎಂದು ಬಿಜೆಪಿ ತಿಳಿಸಿದೆ.
ಈ ವೇಳೆ ಶಾಸಕರಾದ ಎಸ್.ಆರ್. ವಿಶ್ವನಾಥ್, ಮುನಿರಾಜು, ಡಾ. ಸಿ.ಎನ್. ಅಶ್ವತ್ಥನಾರಾಯಣ, ಭಾರತಿಶೆಟ್ಟಿ, ಸಿ.ಕೆ. ರಾಮಮೂರ್ತಿ, ಕೆ.ಎಸ್. ನವೀನ್, ಕೇಶವಪ್ರಸಾದ್, ಸಂಸದರು ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಹಾಗೂ ಬಿಜೆಪಿ ಮುಖಂಡರಾದ ಸಪ್ತಗಿರಿಗೌಡ, ತಮ್ಮೇಶ್‌ಗೌಡ, ಎಸ್. ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







