ರಿಪ್ಪನ್‌ಪೇಟೆ: ರಾಜ್ಯದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿಯ ನೂತನ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಂದ್ರೇಶ್ ಆರೋಪಿಸಿದ್ದಾರೆ.
ಇಲ್ಲಿನ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಪ್ಪನ್‌ಪೇಟೆಯ ಸಮುದಾಯ ಆಸ್ಪತ್ರೆ ನಿರ್ಮಾಣದ ಬಹುಕಾಲದ ಬೇಡಿಕೆಯು ನೆನೆಗುದಿಗೆ ಬಿದ್ದಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಟೀಕಿಸಿದರು. ಅಲ್ಲದೆ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.

ಪದಾಧಿಕಾರಿಗಳ ನೇಮಕ: ಹಿಂದಿನ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್. ಸತೀಶ್ ಅವರು ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸುಂದ್ರೇಶ್ ಅವರನ್ನು ನೇಮಕ ಮಾಡಲಾಗಿದೆ. ಮಂಡಲ ಅಧ್ಯಕ್ಷ ಎನ್. ಸತೀಶ್ ಅವರ ನಿರ್ದೇಶನದಂತೆ ಹುಂಚಾ-ಕೆರೆಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸುಂದ್ರೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಜಿ.ಡಿ. ಮಲ್ಲಿಕಾರ್ಜುನ ಮತ್ತು ಕಟ್ಟೆ ಅರುಣ್ ಅವರನ್ನು ಅಧಿಕೃತವಾಗಿ ನೇಮಿಸಲಾಗಿದೆ.
ಪಕ್ಷ ಸಂಘಟನೆಗೆ ಒತ್ತು: ನೂತನ ಅಧ್ಯಕ್ಷ ಸುಂದ್ರೇಶ್ ಮಾತನಾಡಿ, “ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು” ಎಂದರು. ಪ್ರಧಾನ ಕಾರ್ಯದರ್ಶಿ ಜಿ.ಡಿ. ಮಲ್ಲಿಕಾರ್ಜುನ, ಪಕ್ಷದ ಹಿರಿಯರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ತಿಳಿಸಿದರು.


ಮುಂದಿನ ದಿನಗಳಲ್ಲಿ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪಕ್ಷದ ವತಿಯಿಂದ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸುಂದ್ರೇಶ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಬೆಳ್ಳೂರು ತಿಮ್ಮಪ್ಪ, ಸುಧೀಂದ್ರ ಪೂಜಾರಿ, ರಾಜೇಶ್ ಬುಕ್ಕಿವರೆ, ಕುಮಾರ್ ಕಳಸೆ, ಮಹೇಶ್, ವೆಂಕಟರಮಣ, ಓಮಿನಿ ಸುಧೀಂದ್ರ, ಮುರುಳಿ, ಕಗ್ಗಲಿ ಲಿಂಗಪ್ಪ ಸೇರಿದಂತೆ ಮಹಿಳಾ ಮೋರ್ಚಾದ ಪ್ರಮುಖರು ಉಪಸ್ಥಿತರಿದ್ದರು.
ಬರಹ: ತಂಡ, vishwachetana.com







