ಎಂ. ಗುಡ್ಡೆಕೊಪ್ಪ:28/01/2026
ಹೊಸನಗರ :ಎಂ ಗುಡ್ಡೆಕೊಪ್ಪ ಹೊಸ ವಿಧಾನಸಭಾ ಕ್ಷೇತ್ರ ರಚನೆಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರ ಶ್ರೀ ಕರುಣಾಕರ ಶೆಟ್ಟಿ ಅವರು ಗುರುವಾರ ಕ್ಷೇತ್ರ ಪರ್ಯಟನೆಯ ಭಾಗವಾಗಿ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.

ಈ ವೇಳೆ ಹೂಗುಚ್ಛಗಳ ಬದಲಾಗಿ ‘ನಮ್ಮೂರ ಕಣಜ’ ಎಂಬ ಜ್ಞಾನಭರಿತ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಪಂಚಾಯಿತಿ ಆಡಳಿತ ಮಂಡಳಿ ವಿಶಿಷ್ಟ ಹಾಗೂ ವೈಚಾರಿಕ ಸ್ವಾಗತ ಕೋರಿತು. ಓದುವ ಹವ್ಯಾಸವನ್ನು ಉತ್ತೇಜಿಸುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೈಗೊಂಡ ಈ ಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.


ವಿಧಾನಸಭಾ ಕ್ಷೇತ್ರ ರಚನೆಗೆ ಸಂಬಂಧಿಸಿದ ಹೋರಾಟಕ್ಕೆ ಸೈದ್ಧಾಂತಿಕ ಬೆಂಬಲ ಸೂಚಿಸುವ ಸಂಕೇತವಾಗಿ ಈ ಗೌರವ ಸಲ್ಲಿಸಲಾಯಿತು. ಪಂಚಾಯಿತಿ ಅಧ್ಯಕ್ಷ ಶ್ರೀ ಪ್ರವೀಣ ಜಿ.ಎನ್ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಸುಧಾ ಹೆಚ್ ಅವರ ನೇತೃತ್ವದಲ್ಲಿ ಪಂಚಾಯಿತಿ ಸದಸ್ಯರು ಹೋರಾಟಗಾರ ಕರುಣಾಕರ ಶೆಟ್ಟಿ ಅವರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಶ್ರೀಮತಿ ಎಸ್.ಎಲ್. ನಂದಕುಮಾರಿ, ಶ್ರೀಮತಿ ಸವಿತಾ, ಶ್ರೀ ಕಾಲಸಸಿ ಸತೀಶ, ಶ್ರೀಮತಿ ಬೇಬಿ, ಶ್ರೀ ಶ್ರೀಧರ ಬಿ, ಶ್ರೀ ಮಹೇಂದ್ರ ಬಿ.ಎನ್, ಶ್ರೀಮತಿ ದಿವ್ಯಾ ಕೆ, ಶ್ರೀ ಆರ್. ರಾಘವೇಂದ್ರ, ಶ್ರೀಮತಿ ಶಶಿಕಲಾ, ಶ್ರೀಮತಿ ನಿರ್ಮಲ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










