ಬೆಂಗಳೂರು: ಖ್ಯಾತ ಬರಹಗಾರ ರವಿ ಬೆಳಗರೆ ಅವರ ಕೃತಿಗಳ ನಕಲಿ ಪ್ರತಿಗಳು ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಭಾವನಾ ಪ್ರಕಾಶನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಮೀಶೋ ವೇದಿಕೆಗಳಲ್ಲಿ ‘ಹೇಳಿ ಹೋಗು ಕಾರಣ’ ಸೇರಿದಂತೆ ಹಲವು ಕೃತಿಗಳ ಸ್ಕ್ಯಾನ್ ಕಾಪಿ ಹಾಗೂ ಕಳಪೆ ಗುಣಮಟ್ಟದ ನಕಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪ್ರಕಾಶನದ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಭಾವನಾ ಪ್ರಕಾಶನದ ಪ್ರತಿನಿಧಿ ಮಾತನಾಡಿ, “ನಮ್ಮ ತಂದೆ ಬದುಕಿರುವಾಗಿನಿಂದ ನಾವು ಕಾಪಾಡಿಕೊಂಡು ಬಂದಿರುವ ಗುಣಮಟ್ಟಕ್ಕೆ ಇದು ಅವಮಾನ. ಪ್ರತಿಯೊಂದು ಪುಸ್ತಕವನ್ನು ಪ್ರೂಫ್‌ರೀಡಿಂಗ್‌ನಿಂದ ಹಿಡಿದು ಮುದ್ರಣದವರೆಗೂ ಎಚ್ಚರಿಕೆಯಿಂದ ತಯಾರಿಸಲಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ 147 ರೂ.ಗೆ ಮಾರಾಟವಾಗುತ್ತಿರುವ ಪ್ರತಿಗಳು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿದ ನಕಲಿ ಪ್ರತಿಗಳಾಗಿವೆ. ಕೆಲ ಪುಸ್ತಕಗಳಲ್ಲಿ ಅಧ್ಯಾಯಗಳೇ ಇಲ್ಲ, ಮುದ್ರಣ ಸ್ಪಷ್ಟತೆ ಇಲ್ಲ,” ಎಂದು ಆರೋಪಿಸಿದರು.


ಇಂತಹ ನಕಲಿ ಪ್ರತಿಗಳಿಂದ ಓದುಗರಿಗೆ ತಪ್ಪು ಸಂದೇಶ ಹೋಗುತ್ತಿದೆ. “ಓದುಗರು ಈ ಕಳಪೆ ಪ್ರತಿಗಳನ್ನು ನೋಡಿ ನಮ್ಮ ಪ್ರಕಾಶನದ ಗುಣಮಟ್ಟದ ಮೇಲೆಯೇ ಅನುಮಾನ ಪಡುತ್ತಿದ್ದಾರೆ. ಇದು ನಮ್ಮ ಹೆಸರಿಗೂ, ಬರಹಗಾರರ ಶ್ರಮಕ್ಕೂ ಧಕ್ಕೆಯಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಮೂರು ಪ್ರಮುಖ ಇ-ಕಾಮರ್ಸ್ ವೇದಿಕೆಗಳ ವಿರುದ್ಧ ತಲಾ ಒಂದು ಕೋಟಿ ರೂ. ಪರಿಹಾರ ಮೊತ್ತದ ಕೇಸ್ ದಾಖಲಿಸಲು ತಾವು ಸಿದ್ಧರಾಗಿರುವುದಾಗಿ ಭಾವನಾ ಪ್ರಕಾಶನ ತಿಳಿಸಿದೆ. “ಯಾರು ಈ ನಕಲಿ ಪ್ರತಿಗಳನ್ನು ಮುದ್ರಿಸುತ್ತಿದ್ದಾರೆ, ಯಾರು ಪೂರೈಕೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ನ್ಯಾಯಾಲಯದ ಮೆಟ್ಟಿಲು ಏರುವುದಕ್ಕೂ ನಾವು ಹಿಂದೆ ಸರಿಯುವುದಿಲ್ಲ,” ಎಂದು ಎಚ್ಚರಿಸಿದರು.

ಗ್ರಾಹಕರಿಗೆ ಮಹತ್ವದ ಸೂಚನೆ:
✔️ ಭಾವನಾ ಪ್ರಕಾಶನದ ನಿಜವಾದ ಪುಸ್ತಕಗಳ ದರ ಸಾಮಾನ್ಯವಾಗಿ ₹350ರ ಸುತ್ತಮುತ್ತ ಇರುತ್ತದೆ.
❌ ಇದಕ್ಕಿಂತ ಬಹಳ ಕಡಿಮೆ ದರದಲ್ಲಿ ದೊರಕುವ ಪುಸ್ತಕಗಳನ್ನು ಖರೀದಿಸುವ ಮೊದಲು ಎಚ್ಚರ ವಹಿಸಿ.
📚 ನಕಲಿ ಪುಸ್ತಕಗಳಿಂದ ಓದುಗರಿಗೂ, ಲೇಖಕರಿಗೂ ಹಾಗೂ ಪ್ರಕಾಶಕರಿಗೂ ಅನ್ಯಾಯವಾಗುತ್ತದೆ.
👉 ದಯವಿಟ್ಟು ಅಧಿಕೃತ ಮಾರಾಟಗಾರರಿಂದ ಅಥವಾ ಭಾವನಾ ಪ್ರಕಾಶನದಿಂದಲೇ ನಿಜವಾದ ಪ್ರತಿಗಳನ್ನು ಖರೀದಿಸಿ.
ಓದುಗರಿಗೆ ಮನವಿ ಮಾಡಿದ ಅವರು, “ಭಾವನಾ ಪ್ರಕಾಶನದ ನಿಜವಾದ ಪ್ರತಿಗಳು ಸಾಮಾನ್ಯವಾಗಿ 350 ರೂ. ದರದಲ್ಲಿ ಲಭ್ಯವಿರುತ್ತವೆ. ಇದಕ್ಕಿಂತ ಕಡಿಮೆ ದರದಲ್ಲಿ ಆನ್‌ಲೈನ್‌ನಲ್ಲಿ ಸಿಗುವ ಪುಸ್ತಕಗಳು ಬಹುತೇಕ ನಕಲಿ. ದಯವಿಟ್ಟು ಮೋಸ ಹೋಗಬೇಡಿ, ಅಧಿಕೃತ ಪ್ರತಿಗಳನ್ನೇ ಖರೀದಿಸಿ,” ಎಂದು ಕೋರಿದರು.
ಈ ನಡುವೆ ‘ಹೇಳಿ ಹೋಗು ಕಾರಣ’, ‘ಮಾಂಡೋವಿ’, ‘ಹಿಮಾಲಯನ್ ಬ್ಲೆಂಡರ್’ ಸೇರಿದಂತೆ ಹಲವು ಕೃತಿಗಳ ನಕಲಿ ಪ್ರತಿಗಳು ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾವನಾ ಪ್ರಕಾಶನ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಸ್ಪಷ್ಟ ಉತ್ತರ ಪಡೆಯುವುದಾಗಿ ಪ್ರಕಟಿಸಿದೆ.








