ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿಗೆ ಅವ್ಯವಸ್ಥೆ: ತಾಲ್ಲೂಕು ಆಡಳಿತದ ವಿರುದ್ಧ ಗಂಗಾಮತ ಸಮಾಜದ ತೀವ್ರ ಆಕ್ರೋಶ
ಸಾಗರ: ತಾಲ್ಲೂಕು ಆಡಳಿತದಿಂದ ಗಂಗಾಮತ ಸಮಾಜದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಅವ್ಯವಸ್ಥೆಯ ಕೊಠಡಿಯಲ್ಲಿ ಆಯೋಜಿಸಿರುವುದಕ್ಕೆ ಗಂಗಾಮತ ಸಮಾಜದ ಅಧ್ಯಕ್ಷ ರವಿ ಕುಮಾರ್ ಯಡೇಹಳ್ಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ತಹಶೀಲ್ದಾರ್ ಗೈರಾಗಿದ್ದು, ಅವ್ಯವಸ್ಥೆಗೊಂಡ ಕೊಠಡಿಯಲ್ಲಿ ಕಾರ್ಯಕ್ರಮ ನಡೆಸಿರುವುದನ್ನು ಉಪತಹಶೀಲ್ದಾರ್ ತೋಜಾಕ್ಸಿ ಅವರ ಉಪಸ್ಥಿತಿಯಲ್ಲಿಯೇ ಪ್ರಶ್ನಿಸಿದ ಅವರು, ಆಡಳಿತ ವ್ಯವಸ್ಥೆಯ ನಿರ್ಲಕ್ಷವನ್ನು ಶಾಸಕರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಈ ರೀತಿಯ ವ್ಯವಸ್ಥೆ ಮಾಡಿದ್ದರೆ ಯಾವ ಸಮಾಜದವರು ಇಂತಹ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದು ಪ್ರಶ್ನಿಸಿದ ಅವರು, ಇಂತಹ ಅವ್ಯವಸ್ಥೆ ಮುಂದುವರೆದರೆ ಶಾಸಕರಾಗಲಿ, ಸ್ಥಳೀಯ ಮುಖಂಡರಾಗಲಿ ಯಾರು ಕೂಡ ಕಾರ್ಯಕ್ರಮಗಳಿಗೆ ಆಗಮಿಸುವುದಿಲ್ಲ ಎಂದು ಕಿಡಿಕಾರಿದರು.
ಅಲ್ಲದೆ ನಮ್ಮ ಸಮಾಜಬಾಂಧವರಿಗೆ ಯಾವುದೇ ರೀತಿಯ ಕರೆ ತಾಲ್ಲೂಕು ಆಡಳಿತದಿಂದ ಆಗಿಲ್ಲ. ನಗರದಲ್ಲಿ ಒಂದೇ ಒಂದು ಬ್ಯಾನರ್ ಕೂಡ ಅಳವಡಿಸಿಲ್ಲ. ಕರೆಂಟ್ ಇಲ್ಲ, ಮೈಕ್ ವ್ಯವಸ್ಥೆಯೂ ಇಲ್ಲ. ನಮ್ಮ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಈ ವಿಷಯದ ಬಗ್ಗೆ ಮಾನ್ಯ ತಹಶೀಲ್ದಾರ್ ಹಾಗೂ ತಾಲ್ಲೂಕು ಆಡಳಿತ ತಕ್ಷಣ ಗಮನ ಹರಿಸಬೇಕು ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಉತ್ತಮ ಶಾಸಕರ ಕ್ಷೇತ್ರದಲ್ಲಿ ನಮ್ಮ ಸಮಾಜವನ್ನು ನಿರ್ಲಕ್ಷಿಸಿ ಅವ್ಯವಸ್ಥೆಗೊಂಡ ಕೊಠಡಿಯಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಶಾಸಕರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಕುಮಾರ್, ತಮ್ಮ ನೇರ, ನಿಷ್ಠುರ ಹಾಗೂ ತೀಕ್ಷ್ಣ ಬರಹಗಳ ಮೂಲಕ ವರ್ಣವ್ಯವಸ್ಥೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ ಸೇರಿದಂತೆ ಸಾಮಾಜಿಕ ಅನಿಷ್ಟಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ಜೀವನಸಂದೇಶವನ್ನು ಸ್ಮರಿಸಿದರು. ನಿರ್ಮಲ ಭಕ್ತಿ ಹಾಗೂ ನಿಸ್ವಾರ್ಥ ಸೇವೆಯೇ ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗಗಳೆಂದು ಹೇಳಿ, ಅವರ ಜಯಂತಿಯ ಸಂದರ್ಭದಲ್ಲಿ ಭಾವಪೂರ್ಣ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿವಾನಂದ್ (ಅಧ್ಯಕ್ಷರು, ಗಂಗಾಮತ ಸಮಾಜ – ಸಾಗರ ಪಟ್ಟಣ), ಬಿ.ಡಿ. ರವಿ (ಪತ್ರಕರ್ತರು), ಶಿವಾನಂದ್ ಗೇರ್ಬಿಸ್ (ಗ್ರಾಮ ಪಂಚಾಯತ್ ಸದಸ್ಯರು – ಯಡೆಹಳ್ಳಿ), ಆನಂದ್ ಬಾಲೆಕೊಪ್ಪ, ರವಿ ಆಯನೂರು (ಅಧ್ಯಕ್ಷರು – ತಾಲ್ಲೂಕು ಗಂಗಾಮತ ನೌಕರರ ಸಂಘ), ಭಾಸ್ಕರ್ ಸೀಗೆಮಟ್ಟಿ (ಕಾರ್ಯದರ್ಶಿ – ಗಂಗಾಮತ ಸಮಾಜ ಸಾಗರ), ದಯಾನಂದ್, ಸಂತೋಷ್, ಸತೀಶ್, ದೇವರಾಜ್, ಮಂಜುನಾಥ್, ಪ್ರಕಾಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.








