
ಬೆಂಗಳೂರು: ರಾಜಧಾನಿಯಲ್ಲಿ ನಡೆದ ೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಮಲೆನಾಡಿನ ಸೊಗಡು ಹಸಿರಾಗಿ ಮೂಡಿಬಂದಿದೆ. ಹೊಸನಗರ ಮತ್ತು ಸಾಗರ ತಾಲ್ಲೂಕಿನ ಕಲಾವಿದರೇ ಹೆಚ್ಚಾಗಿರುವ, ಗಾರ್ಗಿ ಕಾರೇಹಕ್ಲು ನಿರ್ದೇಶನದ ‘ಹಕ್ಕಿಗಾಗಿ’ ಸಿನಿಮಾವು ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರತಿಷ್ಠಿತ ‘NETPAC JURY AWARD’ ಮುಡಿಗೇರಿಸಿಕೊಳ್ಳುವ ಮೂಲಕ ಮಲೆನಾಡಿನ ಕೀರ್ತಿಯನ್ನು ಹೆಚ್ಚಿಸಿದೆ.
ಹೊಸನಗರ-ಸಾಗರ ಸುತ್ತಮುತ್ತಲೇ ಚಿತ್ರೀಕರಣ
ಈ ಸಿನಿಮಾದ ವಿಶೇಷತೆಯೆಂದರೆ ಇದರ ಬಹುಪಾಲು ಚಿತ್ರೀಕರಣ ನಡೆದಿರುವುದು ಹೊಸನಗರದ ಸಾರ ಸಂಸ್ಥೆ ಹಾಗೂ ಸಾಗರ ತಾಲ್ಲೂಕಿನ ನೈಸರ್ಗಿಕ ತಾಣಗಳಲ್ಲಿ. ಮಲೆನಾಡಿನ ಪರಿಸರದಲ್ಲಿ ಮಿಂದೆದ್ದಿರುವ ಈ ಚಿತ್ರಕ್ಕೆ ಅಲ್ಲಿನ ಮಣ್ಣಿನ ಗುಣವೇ ಜಾಗತಿಕ ಮಟ್ಟದ ಮನ್ನಣೆ ತಂದುಕೊಟ್ಟಿದೆ.

ಚಿತ್ರದ ಹೈಲೈಟ್ಸ್:ಪರಿಸರ ವಿಜ್ಞಾನಿ ನಾಗೇಶ್ ಹೆಗಡೆ ನಟನೆ: ಖ್ಯಾತ ಪರಿಸರ ವಿಜ್ಞಾನಿ ನಾಗೇಶ್ ಹೆಗಡೆ ಅವರು ಮೊದಲ ಬಾರಿಗೆ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
•ಸ್ಥಳೀಯ ಪ್ರತಿಭೆಗಳ ಸಮಾಗಮ: ಚಿತ್ರದ ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಬಹುತೇಕ ತಾಂತ್ರಿಕ ವರ್ಗ ಮತ್ತು ನಟರು ಶಿವಮೊಗ್ಗ ಜಿಲ್ಲೆಯ ಹೊಸನಗರ ಹಾಗೂ ಸಾಗರ ತಾಲ್ಲೂಕಿನವರೇ ಆಗಿದ್ದಾರೆ.
•ಕಲಾವಿದರ ದಂಡು: ಮುಖ್ಯ ಭೂಮಿಕೆಯಲ್ಲಿ ನಾಗರಾಜ ನೀಲ್, ಸಾನ್ವಿ, ಪದ್ಮಶ್ರೀ ಹಾರೆಕೊಪ್ಪ ಅವರೊಂದಿಗೆ ಹೊಸನಗರ ಭಾಗದ ಅನೇಕ ಪ್ರತಿಭೆಗಳು ಬಣ್ಣ ಹಚ್ಚಿದ್ದಾರೆ.


ಹೊಸನಗರದ ತಂತ್ರಜ್ಞರು ಮತ್ತು ಕಲಾವಿದರ ಪಟ್ಟಿ:
ಈ ಚಿತ್ರದಲ್ಲಿ ಹೊಸನಗರ ಮತ್ತು ಸಾಗರ ಭಾಗದ ಕಲಾವಿದರಾದ ಮಂಜುನಾಥ್ ಬ್ಯಾಣದ್, ಗಣಪತಿ ಹೆಗಡೆ, ಕುಮಾರ್ ಹೆಚ್ ಜಿ ಹಾಗೂ ಬಾಲ ಕಲಾವಿದರಾದ ಚಿನ್ಮಯಿ ಎಮ್ ಬ್ಯಾಣದ್, ಶ್ರೀರಾಮ್ ಸೂರ್ಯ, ಅವನೀಶ್, ಸಮೃದ್ಧ ಮತ್ತು ಸಮರ್ಥ ಅದ್ಭುತವಾಗಿ ಅಭಿನಯಿಸಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಧ್ವನಿ ಗ್ರಹಣ ಮಾಡಿದ ಮೇಘರಾಜ್ ಮತ್ತು ತಾಂತ್ರಿಕ ಸಹಾಯ ನೀಡಿದ ಅಪೂರ್ವ ಮೃತ್ಯುಂಜಯ ಅವರ ಶ್ರಮವೂ ಎದ್ದು ಕಾಣುತ್ತದೆ.

ತಾಂತ್ರಿಕ ತಂಡ:ನಿರ್ದೇಶನ: ಗಾರ್ಗಿ ಕಾರೇಹಕ್ಲು
ನಿರ್ಮಾಣ: ಹರೀಶ್ ಹೆಚ್ ಎಸ್, ಗಾರ್ಗಿ ಕಾರೇಹಕ್ಲು (‘ಅನಿಮಿಷ ಚಿತ್ರಶಾಲೆ’ ಮತ್ತು ‘ಪರಿ ಮೂವಿ ಮೇಕರ್ಸ್’)
ಸಂಗೀತ: ಯದು ನಂದನ್
ಛಾಯಾಗ್ರಹಣ: ಪ್ರದೀಪ್ ಆರ್ಯನ್
ಸಂಕಲನ: ಸ್ಯಾಮ್ ಸನ್ ಜೆ ಸೈಮನ್
ಅಪ್ಪಟ ಮಲೆನಾಡಿನ ಪ್ರತಿಭೆಗಳು ಸೇರಿ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ನಿರ್ಮಿಸಿದ ಈ ಚಿತ್ರಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪ್ರಶಸ್ತಿ ಸಂದಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಬರಹ: ತಂಡ, vishwachetana.com







