
ಗರ್ತಿಕೆರೆ ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕರ ವರ್ಗಾವಣೆಗಾಗಿ ಎಸ್ಡಿಎಂಸಿ ಮನವಿ
ಗರ್ತಿಕೆರೆ ಕೆಪಿಎಸ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆಗೆ ಒತ್ತಾಯಿಸಿ ಶಾಲಾಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್ಡಿಎಂಸಿ) ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ, ಮುಖ್ಯ ಶಿಕ್ಷಕರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಶಾಲೆಯ ವಿಚಾರಗಳಲ್ಲಿ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಡಿಎಂಸಿ ಸದಸ್ಯರೊಂದಿಗೆ ಅವಾಚ್ಯ ಶಬ್ದಗಳಿಂದ ವರ್ತಿಸಿ ನಿಂದಿಸಿದ್ದಾರೆ ಎಂಬ ಆರೋಪವೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಈಗಾಗಲೇ ಮೂರನೇ ಮನವಿಯಾಗಿದ್ದು, ಹಿಂದಿನ ಮನವಿಯ ಸಂದರ್ಭದಲ್ಲಿ ಮೂರು ತಿಂಗಳೊಳಗೆ ಸ್ವಯಂ ವರ್ಗಾವಣೆ ಪಡೆಯುವುದಾಗಿ ಮುಖ್ಯ ಶಿಕ್ಷಕರು ಭರವಸೆ ನೀಡಿದ್ದರು. ಆದರೆ ನಂತರವೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬರದ ಹಿನ್ನೆಲೆಯಲ್ಲಿ ಪುನಃ ಮನವಿ ಸಲ್ಲಿಸಲಾಗಿದೆ ಎಂದು ಎಸ್ಡಿಎಂಸಿ ತಿಳಿಸಿದೆ.
ಇದಲ್ಲದೆ, ಪಾಠದ ಸಮಯದಲ್ಲಿ ಅತಿಯಾಗಿ ಮೊಬೈಲ್ ಬಳಕೆ ಮಾಡುವುದು, ಬ್ಲೂಟೂತ್ ಹಾಕಿಕೊಂಡು ಮಾತನಾಡುವುದು ಹಾಗೂ ಮಕ್ಕಳಿಗೆ ಸಮರ್ಪಕ ಬೋಧನೆ ನೀಡದಿರುವುದಾಗಿ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ. ಶಾಲೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ತಕ್ಷಣ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಳಿಸಬೇಕೆಂದು ಎಸ್ಡಿಎಂಸಿ ಒತ್ತಾಯಿಸಿದೆ.
ಈ ಮನವಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಿಸಿದ ಸಚಿವರಿಗೆ ಸಲ್ಲಿಸಲಾಗಿದೆ.

ಮುಖ್ಯ ಶಿಕ್ಷಕ ವರ್ಗಾವಣೆ ವಿರೋಧಿಸಿ ಪೋಷಕರ ಪ್ರತಿಭಟನೆ
ಗರ್ತಿಕೆರೆ ಕೆಪಿಎಸ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ್ ಅವರನ್ನು ವರ್ಗಾವಣೆಗೊಳಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ, ಕೆಲವು ಪೋಷಕರು ಹಾಗೂ ಶಿಕ್ಷಕರ ಬೆಂಬಲಿಗರು ಶಾಲೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ಪ್ರಕಾರ, ಸತ್ಯನಾರಾಯಣ್ ಅವರು ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ಮತ್ತು ಪೋಷಕರ ವಿಶ್ವಾಸಕ್ಕೆ ಅವರು ಕಾರಣರಾಗಿದ್ದಾರೆ ಎಂದು ಪೋಷಕರು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಕ್ಷೇತ್ರ ಮರು ಸ್ಥಾಪನೆಗೆ ತಾವು ಕಲೆ ಹಾಕಿರುವ ಅಗತ್ಯ ದಾಖಲೆಗಳನ್ನು ಪ್ರದರ್ಶಿಸಿ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಿದರು. ಅಲ್ಲದೇ ಹೋರಾಟಕ್ಕೆ ಎಲ್ಲಾ ಬಗೆಯ ಸಹಕಾರ ನೀಡುವ ಭರವಸೆ ನೀಡಿದರು.
ಇಂತಹ ಶಿಕ್ಷಕರ ವರ್ಗಾವಣೆ ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶಾಲಾಭಿವೃದ್ಧಿ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ರಚಿಸಬೇಕೆಂದು ಅವರು ಆಗ್ರಹಿಸಿದರು.

ಅಲ್ಲದೆ, ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಹಾಗೂ ಶಾಲೆಯಲ್ಲಿ ಪಾರದರ್ಶಕ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ, ಶಾಲೆಯಲ್ಲಿರುವ ಎಲ್ಲಾ ಮಕ್ಕಳ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆದು ಸಾಮೂಹಿಕವಾಗಿ ಬೇರೆ ಶಾಲೆಗಳಿಗೆ ದಾಖಲಿಸುವ ಕಠಿಣ ನಿರ್ಧಾರ ಕೈಗೊಳ್ಳುವುದಾಗಿ ಪೋಷಕರು ಎಚ್ಚರಿಸಿದರು.
ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ನ್ಯಾಯಯುತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.








