ಹೊಸನಗರ: ನಗರ (ಸಂಪೆಕಟ್ಟೆ): ನಾವೆಲ್ಲ ಹಿಂದೂವಾಗಿ ಬದುಕಿದರೆ ಮಾತ್ರ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಉಳಿಯುತ್ತದೆ. ಹಿಂದೂ ಸಮಾಜವು ಸಾಮರಸ್ಯದಿಂದ ಬದುಕುವುದರೊಂದಿಗೆ ಸ್ವದೇಶಿ, ಸ್ವಭಾಷೆ, ಸ್ವಭೂಷಾ, ಸ್ವಾಭಿಮಾನ ಮತ್ತು ಸಾವಯವ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಭಾರತ ಬಲಿಷ್ಠವಾಗುತ್ತದೆ ಎಂದು ಚಕ್ಕೋಡುಬೈಲು ಶ್ರೀವತ್ಸ ಅಭಿಪ್ರಾಯಪಟ್ಟರು.

ಸಂಪೆಕಟ್ಟೆ ಮಂಡಲದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಭೆಗೆ ಬಿ.ಎನ್. ಭಾಸ್ಕರ್ ಅಂಕಣಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ್ ಶ್ರೀನಿವಾಸ್ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.


ಸಂಪೆಕಟ್ಟೆಯ ಮುಖ್ಯ ರಸ್ತೆಯಲ್ಲಿ ಮಾತೆಯರಿಂದ ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳೊಂದಿಗೆ ಮೆರವಣಿಗೆ ಸಾಗಿಸಿ ಸಂಗಮ ಸ್ಥಳ ತಲುಪಿತು. ಗೋಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಭಜನಾ ಕುಣಿತ, ಲಾವಣಿ, ಕೋಲಾಟ, ಜನಪದ ಗೀತೆ, ನಾಟಕ, ಸೋಬಾನೆ ಪದ, ಭಗವದ್ಗೀತೆ ಪಠಣ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ವೇದಗೋಷ್ಠಿಯಿಂದ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಈ ವೇಳೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ವಿನಯ್ ಶೆಟ್ಟಿ, ಮಂಡಲ ಅಧ್ಯಕ್ಷ ಗಣಪತಿ ಬಿ., ಶ್ರೀಮತಿ ಪುಷ್ಪಾ ಕುಮಾರ್, ಹಿರಿಯ ಕಾರ್ಯಕರ್ತರಾದ ಲಕ್ಷ್ಮೀ ನರಸಿಂಹ ಭಟ್, ಸತ್ಯನಾರಾಯಣ ದೊಡ್ಡಲೇ ಪಾಲ್, ಚಂದ್ರ ಭಟ್ ದೊಡ್ಡಲೇ ಪಾಲ್, ಶ್ರೀಧರ್ ಶೆಟ್ಟಿ, ಮಣಿಕಂಠ ಅಡಗೋಡಿ, ನಾಗರಾಜ ಎಸ್. ಮಡೋಡಿ, ಶ್ರೀಮತಿ ವಿನೋದ ಚಂದ್ರಾಚಾರ್ಯ, ಪ್ರತಿಮಾ ಭಾಸ್ಕರ್, ಸುಧೀಂದ್ರ ಪಂಡಿತ್, ಚಂದ್ರು ಶೆಟ್ಟಿ, ನರಸಿಂಹ, ಗಣಪತಿ ಶುಂಠಿ, ಕುಮಾರ್ ಭಟ್, ಅನಂತ್ ಶೇಟ್, ಸತ್ಯನಾರಾಯಣ ಹೊಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾಲಾಶ್ರೀ, ಉದಯ್ ಮತ್ತು ಅಶ್ವಿನಿ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು.








