ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಂಪೆಕಟ್ಟೆ ಪ್ರೌಢಶಾಲೆಯಲ್ಲಿ ದತ್ತಿನಿಧಿ ಕಾರ್ಯಕ್ರಮ
ಹೊಸನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಂಪೆಕಟ್ಟೆಯ ಪ್ರೌಢಶಾಲೆಯಲ್ಲಿ ಶ್ರೀಮತಿ ಸಾವಿತ್ರಮ್ಮ ಅಂಬ್ರಯ್ಯಮಠ ದತ್ತಿ ನಿಧಿ ಹಾಗೂ ಶ್ರೀ ಶಾಮಣ್ಣ ಉಡುಪ ನಗರ ದತ್ತಿ ನಿಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಣೇಶ ಮೂರ್ತಿ ನಾಗರಕುಡಿಗೆ ಅವರು ಮಾತನಾಡಿ, ದತ್ತಿ ದಾನಿಗಳು ತಮ್ಮ ಪ್ರಿಯರ ಹೆಸರಿನಲ್ಲಿ ಇಟ್ಟಿರುವ ದೇಣಿಗೆಯ ಬಡ್ಡಿ ಹಣದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿವರ್ಷ ದತ್ತಿ ದಾನಿಗಳು ಸೂಚಿಸಿದ ವಿಷಯದ ಮೇಲೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ವ್ಯವಸ್ಥೆ ನಡೆದುಕೊಂಡು ಬಂದಿದೆ ಎಂದು ಹೇಳಿದರು.


ಈ ಕಾರ್ಯಕ್ರಮವು ಜ್ಞಾನವನ್ನು ಎಲ್ಲರಿಗೂ ಪಸರಿಸುವ ಜೊತೆಗೆ ದತ್ತಿದಾನಿಗಳ ಹಣವನ್ನು ಸಾಹಿತ್ಯದ ಮೂಲಕ ಸದುಪಯೋಗಪಡಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಅವರು ಮಾತನಾಡಿ, ಸಾಹಿತ್ಯ ಮತ್ತು ಇತಿಹಾಸದ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ವಿವರಿಸಿದರು.
ದತ್ತಿದಾನಿ ಅಂಬ್ರಯ್ಯ ಮಠ ಅವರು ಮಾತನಾಡಿ, ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಶಾಸನಗಳನ್ನು ಓದಿ, ಸುತ್ತಮುತ್ತಲಿನ ಕುರುಹುಗಳನ್ನು ಸಂಗ್ರಹಿಸಿ ಪರಿಶ್ರಮಪಟ್ಟು ಬರೆಯುವ ಕೃತಿಗಳು ಕಾದಂಬರಿಗಳಂತೆ ಕಂಡರೂ ಅವುಗಳಲ್ಲಿ ಸತ್ಯ ಅಡಕವಾಗಿರುತ್ತದೆ. ಸಾಹಿತ್ಯದ ಜೊತೆಗೆ ಇತಿಹಾಸವೂ ಬೆರೆತು ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರ ಶೆಟ್ಟಿ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿ, ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕ್ಷಮಾ ಟಿ.ಜಿ ಉಪಸ್ಥಿತರಿದ್ದರು. ಕಾರ್ತಿಕ್ ಸ್ವಾಗತಿಸಿ, ನೀತಾ ಜಿ ನಿರೂಪಿಸಿ, ಅಶ್ವಿನಿ ಪಂಡಿತ್ ವಂದಿಸಿದರು. ದತ್ತಿನಿಧಿ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.








